ADVERTISEMENT

ಮಲೇಷ್ಯಾವನ್ನು ಮಣಿಸಿದ ಭಾರತ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಮಲೇಷ್ಯಾವನ್ನು ಮಣಿಸಿದ ಭಾರತ
ಮಲೇಷ್ಯಾವನ್ನು ಮಣಿಸಿದ ಭಾರತ   

ಗೋಲ್ಡ್ ಕೋಸ್ಟ್‌ (ಪಿಟಿಐ): ಲಭಿಸಿದ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಎರಡನ್ನು ಸಮರ್ಥವಾಗಿ ಬಳಸಿಕೊಂಡ ಗುರುಜೀತ್ ಕೌರ್‌ ಭಾರತದ ಭರ್ಜರಿ ಜಯಕ್ಕೆ ಕಾರಣರಾದರು. ಶುಕ್ರವಾರ ನಡೆದ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ 4–1ರಿಂದ ಮಲೇಷ್ಯಾವನ್ನು ಮಣಿಸಿತು.

ಗುರುವಾರ ‘ಎ’ ಗುಂಪಿನ ಪಂದ್ಯದಲ್ಲಿ ವೇಲ್ಸ್ ವಿರುದ್ಧ 2–3ರಿಂದ ಸೋತಿದ್ದ ಭಾರತ ಶುಕ್ರವಾರ ಆರಂಭದಲ್ಲೇ ಪಾರುಪತ್ಯ ಸ್ಥಾಪಿಸಿತು. ಆರನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶ ಭಾರತದ ಮುನ್ನಡೆಗೆ ನೆರವಾಯಿತು. ಕೌರ್ ಗೋಲು ಗಳಿಸಿ ಮಿಂಚಿದರು.

38ನೇ ನಿಮಿಷದಲ್ಲಿ ನುರೈನಿ ರಶೀದ್‌ ಗಳಿಸಿದ ಗೋಲಿನ ಮೂಲಕ ಮಲೇಷ್ಯಾ ತಿರುಗೇಟು ನೀಡಿತು. ಆದರೆ ಮರು ನಿಮಿಷದಲ್ಲೇ ಗುರುಜೀತ್‌ ಚೆಂಡನ್ನು ಗುರಿ ಸೇರಿಸಿ ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. 56ನೇ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್ ಮತ್ತು 59ನೇ ನಿಮಿಷದಲ್ಲಿ ಲಾಲ್‌ರೆಮ್‌ಸಿಯಾಮಿ ಗಳಿಸಿದ ಗೋಲುಗಳು ಭಾರತಕ್ಕೆ ಭರ್ಜರಿ ಜಯ ಗಳಿಸಿಕೊಟ್ಟವು.

ADVERTISEMENT

‘ಈ ಗೆಲುವು ತುಂಬ ಖುಷಿ ನೀಡಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ತಂಡ ಉತ್ತಮ ಸಾಮರ್ಥ್ಯ ತೋರಿತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಮಲೇಷ್ಯಾ ಉತ್ತಮ ಆಟವಾಡಿತು’ ಎಂದು ರಾಣಿ ರಾಂಪಾಲ್ ಹೇಳಿದರು.

‘ಗುರುವಾರ ನಮ್ಮ ಪಾಲಿಗೆ ಕೆಟ್ಟ ದಿನವಾಗಿತ್ತು. ಕ್ರೀಡೆಯಲ್ಲಿ ಕೆಲವೊಮ್ಮೆ ಹೀಗೆ ಆಗುತ್ತದೆ. ಇಂದು ಪುಟಿದೇಳಲು ಸಾಧ್ಯವಾದದ್ದು ಖುಷಿಯ ವಿಷಯ. ತಂಡದ ರಕ್ಷಣಾ ವಿಭಾಗ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾದದ್ದು ತಂಡದ ಗೆಲುವಿಗೆ ಕಾರಣವಾಯಿತು’ ಎಂದು ರಾಣಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.