ಲಂಡನ್: ಭಾರತದ ಟಿಂಟು ಲೂಕಾ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಮಹಿಳೆಯರ 800 ಮೀ. ಓಟದ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ಪರ್ಧೆಯ ಎರಡನೇ ಹೀಟ್ಸ್‌ನಲ್ಲಿ ಓಡಿದ ಟಿಂಟು 2:01.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
ಈ ಸಮಯ ಎರಡನೇ ಹೀಟ್ಸ್‌ನಲ್ಲಿ ಅವರಿಗೆ ಮೂರನೇ ಸ್ಥಾನ ತಂದುಕೊಟ್ಟಿತು. ಪ್ರತಿ ಹೀಟ್ಸ್‌ನಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರು ನೇರವಾಗಿ ಸೆಮಿಫೈನಲ್‌ಗೆ ಮುನ್ನಡೆಯುವರು. ಸೆಮಿಫೈನಲ್ ಗುರುವಾರ ಹಾಗೂ ಫೈನಲ್ ಶನಿವಾರ ನಡೆಯಲಿದೆ.
ಟಿಂಟು ಅವರು ಒಲಿಂಪಿಕ್ಸ್‌ನಲ್ಲಿ 800 ಮೀ ಓಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೂರನೇ ಮಹಿಳಾ ಅಥ್ಲೀಟ್ ಎನಿಸಿಕೊಂಡರು. ಈ ಹಿಂದೆ ಶೈನಿ ವಿಲ್ಸನ್ (1984) ಮತ್ತು ಕೆ.ಎಂ. ಬೀನಾಮೋಳ್ (2000) ಇಂತಹದೇ ಸಾಧನೆ ಮಾಡಿದ್ದರು.
ರಷ್ಯಾದ ಮರಿಯಾ ಸವಿನೋವಾ 2:01.56 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಹೀಟ್ಸ್‌ನ್ನು ಗೆದ್ದುಕೊಂಡರು. ಅಮೆರಿಕದ ಅಲೈಸ್ ಶ್ಮಿತ್ (2:01.65) ಎರಡನೇ ಸ್ಥಾನ ಪಡೆದರು.
ಕೊನೆಯ ಲ್ಯಾಪ್‌ನಲ್ಲಿ ಸವಿನೋವಾ ಮತ್ತು ಶ್ಮಿತ್ ಇತರರನ್ನು ಹಿಂದಿಕ್ಕಿ ಮುನ್ನುಗ್ಗಿದರು. ಈ ಕಾರಣ ಮೂರನೇ ಸ್ಥಾನಕ್ಕಾಗಿ ಟಿಂಟು ಹಾಗೂ ಮೊರಕ್ಕೊದ ಮಲಿಕಾ ಅಕೌಯಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿಕೊಂಡ ಕಾರಣ ಟಿಂಟು ಸೆಮಿಫೈನಲ್‌ಗೆ ಅರ್ಹತೆ ಪಡೆದರು. 2:01.75 ಸೆಕೆಂಡ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದ ಮಲಿಕಾ ಮುಂದಿನ ಹಂತ ಪ್ರವೇಶಿಸುವಲ್ಲಿ ವಿಫಲರಾದರು.
ಮಾಜಿ ಅಥ್ಲೀಟ್ ಪಿ.ಟಿ. ಉಷಾ ಗರಡಿಯಲ್ಲಿ ಪಳಗಿರುವ ಟಿಂಟು ಫೈನಲ್ ಪ್ರವೇಶಿಬೇಕಾದರೆ ತಮ್ಮ ಸಮಯವನ್ನು ಇನ್ನಷ್ಟು ಉತ್ತಮಪಡಿಸುವುದು ಅಗತ್ಯ. ಏಕೆಂದರೆ ಇಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಟಿಂಟು ಇರುವ ಗುಂಪಿನಲ್ಲೇ ದಕ್ಷಿಣ ಆಫ್ರಿಕಾದ ಕಾಸ್ಟರ್ ಸೆಮೆನ್ಯಾ ಮತ್ತು ಕೀನ್ಯಾದ ಜಾನೆತ್ ಜೆಪ್‌ಕೊಸ್ಗಿ ಇದ್ದಾರೆ.
ಬೀಜಿಂಗ್ ಕೂಟದಲ್ಲಿ ಚಿನ್ನ ಜಯಿಸಿದ್ದ ಪಮೇಲಾ ಜೆಲಿಮಾ 2:00.54 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದರು.
`ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ. ಗುರುವಾರ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಬೇಕು~ ಎಂದು ಟಿಂಟು ಪ್ರತಿಕ್ರಿಯಿಸಿದರು. `ಮೊದಲ ಲ್ಯಾಪ್‌ನಲ್ಲಿ ಅಲ್ಪ ನಿಧಾನವಾಗಿ ಓಡಿದೆ. ಈ ಕಾರಣ ಇತರ ಓಟಗಾರ್ತಿಯರು ನನ್ನನ್ನು ಹಿಂದಿಕ್ಕಿದರು~ ಎಂದರು.
`ಕೊನೆಯ 200 ಮೀ. ಇರುವಾಗ ಟ್ರ್ಯಾಕ್‌ನ ಮೊದಲ ಎರಡು ಲೇನ್‌ಗಳನ್ನು ಬಿಟ್ಟು ಅಲ್ಪ ಹೊರಭಾಗದಲ್ಲಿ ಓಡಬೇಕು. ಆಕೆ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುವುದು ಸಂತಸ ಉಂಟುಮಾಡಿದೆ. ಸೆಮಿಫೈನಲ್‌ನಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಓಡುವುದು ಅಗತ್ಯ~ ಎಂದು ಕೋಚ್ ಪಿ.ಟಿ. ಉಷಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.