ADVERTISEMENT

ಮಿನುಗುತ್ತಿರುವ ಕ್ರಿಕೆಟಿಗರು...!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST


ಡಬ್ಲಿನ್ (ಎಎಫ್‌ಪಿ): ಇಂಗ್ಲೆಂಡ್ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಜಯ ಗಳಿಸಿದ್ದೇ ತಡ ಐರ್ಲೆಂಡ್ ತಂಡದ ಆಟಗಾರರು ರಾತ್ರಿ ಬೆಳಗಾಗುವಷ್ಟರಲ್ಲಿ ದೇಶದ ಕ್ರೀಡಾ ತಾರೆಗಳಾಗಿ ಮಿನುಗುತ್ತಿದ್ದಾರೆ.

ಇನ್ನೇನು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಎಂಡಾ ಕೆನ್ನಿ, ತಂಡದ ಈ ಐತಿಹಾಸಿಕ ಜಯ ಸಿಕ್ಕ ಕ್ಷಣವನ್ನು ‘ಐರ್ಲೆಂಡ್ ಕ್ರೀಡಾ ಇತಿಹಾಸದಲ್ಲಿ ಇದೊಂದು ಮಹತ್ವದ ಗಳಿಗೆ’ ಎಂದು ಬಣ್ಣಿಸಿದ್ದಾರೆ. ‘ಐರ್ಲೆಂಡ್ ತಂಡದ ಆಟಗಾರರು ದೇಶದ ಘನತೆಗೆ ತಕ್ಕಂತೆ ಆಡಿದ್ದಾರೆ. ಧೈರ್ಯ, ಸಾಹಸ ಹಾಗೂ ದೇಶಾಭಿಮಾನದಿಂದ ಆಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕ್ರಿಕೆಟ್ ಆಟಗಾರರ ಈ ಸಾಧನೆ ಪ್ರತಿಯೊಬ್ಬ ಐರಿಷ್ ಪ್ರಜೆಗೂ ಪ್ರೇರಣೆಯಾಗಿದೆ. ಪ್ರಪಂಚದ ಯಾವುದೇ ಪ್ರದೇಶದಲ್ಲಿದ್ದರೂ ತಮ್ಮ ರಂಗದಲ್ಲಿ ಉನ್ನತ ಸಾಧನೆ ಮಾಡಲು ಸ್ಫೂರ್ತಿ ತುಂಬಿದೆ’ ಎಂದು ಅವರು ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕೆವಿನ್ ಓ’ಬ್ರೇನ್ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದರು. 2007ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದ ಐರ್ಲೆಂಡ್ ಸೋಜಿಗದ ಫಲಿತಾಂಶ ಹೊರಸೂಸುವಂತೆ ಮಾಡಿತ್ತು. ವಲಸಿಗರೇ ಹೆಚ್ಚಾಗಿ ತುಂಬಿಕೊಂಡಿರುವ ಐರ್ಲೆಂಡ್ ದೇಶದಲ್ಲಿ ಉತ್ತರ ಪ್ರಾಂತ್ಯದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿದೆ. ತಂಡದಲ್ಲಿರುವ ಆಟಗಾರರು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ ಹಾಗೂ ಪಾಕಿಸ್ತಾನದ ಮೂಲದವರಾಗಿದ್ದಾರೆ.

ದಶಕಗಳ ಹಿಂದೆ ಕ್ರಿಕೆಟ್ ಆಟ ಈ ದೇಶದಲ್ಲಿ ರಾಜಕೀಯ ಉದ್ದೇಶವನ್ನೂ ಹೊಂದಿತ್ತು. ವಸಾಹತು ವ್ಯವಸ್ಥೆಯಲ್ಲಿ ಬ್ರಿಟಿಷ್ ಸೈನ್ಯದೊಂದಿಗೆ ಗುರುತಿಸಿಕೊಂಡಿದ್ದ ಐರ್ಲೆಂಡ್, ಕ್ರಿಕೆಟ್‌ಗೆ ‘ಗ್ಯಾರಿಸನ್ ಆಟ’ ಎಂದು ಕರೆಯುತ್ತಿತ್ತು. 19ನೇ ಶತಮಾನದ ಆರಂಭದಲ್ಲಿ ಭೂ ಕದನಗಳು ಹಾಗೂ ಅದೇ ಶತಮಾನದ ಕೊನೆಯಲ್ಲಿ ದೇಶೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಜನ್ಮತಾಳಿದ  ಗ್ಯಾಲಿಕ್ ಅಥ್ಲೆಟಿಕ್ ಸಂಸ್ಥೆ (ಜಿಎಎ) ಕ್ರಿಕೆಟ್‌ಗೆ ಒಂದಿಷ್ಟು ಹಿನ್ನಡೆಯನ್ನು ಉಂಟು ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.