ADVERTISEMENT

ಮುಂಬಾ ಮಣಿಸಿದ ತಲೈವಾಸ್‌

ಪಿಟಿಐ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಯು ಮುಂಬಾ ಆವರಣಕ್ಕೆ ನುಗ್ಗಿದ ತಮಿಳ್ ತಲೈವಾಸ್‌ನ ಅಜಯ್ ಠಾಕೂರ್ ಪಾಯಿಂಟ್ ಗಳಿಸಲು ಶ್ರಮಿಸಿದ ಸಂದರ್ಭ
ಯು ಮುಂಬಾ ಆವರಣಕ್ಕೆ ನುಗ್ಗಿದ ತಮಿಳ್ ತಲೈವಾಸ್‌ನ ಅಜಯ್ ಠಾಕೂರ್ ಪಾಯಿಂಟ್ ಗಳಿಸಲು ಶ್ರಮಿಸಿದ ಸಂದರ್ಭ   

ಜೈಪುರ: ಅಪ್ರತಿಮ ರೈಡರ್‌ ಅಜಯ್‌ ಠಾಕೂರ್ ಅವರ ನೇತೃತ್ವದಲ್ಲಿ ಸಂಘಟಿತ ಆಟ ಆಡಿದ ತಮಿಳ್ ತಲೈವಾಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ಅಮೋಘ ಜಯ ದಾಖಲಿಸಿದರು.

ಇಲ್ಲಿನ ಸವಾಯ್‌ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಅಂತರ ವಲಯ ಪಂದ್ಯದಲ್ಲಿ ಈ ತಂಡ ಬಲಿಷ್ಠ ಯು ಮುಂಬಾವನ್ನು ಮೂರು ಪಾಯಿಂಟ್‌ಗಳ ಅಂತರದಿಂದ ಮಣಿಸಿತು.

ತಲೈವಾಸ್‌ 38 ಪಾಯಿಂಟ್‌ ಗಳಿಸಿದರೆ ಸಮಬಲದ ಹೋರಾಟ ನೀಡಿದ ಮುಂಬಾ 35 ಪಾಯಿಂಟ್ ಗಳಿಸಿ ಸೋಲೊಪ್ಪಿಕೊಂಡಿತು.

ADVERTISEMENT

ರೋಚಕ ಹಣಾಹಣಿಯಲ್ಲಿ ಅಜಯ್ ಠಾಕೂರ್ 15 ರೈಡಿಂಗ್ ಪಾಯಿಂಟ್‌ ಗಳಿಸಿ ಕಬಡ್ಡಿ ಪ್ರಿಯರನ್ನು ರಂಜಿಸಿದರು. ಈ ಮೂಲಕ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 500 ಪಾಯಿಂಟ್‌ ಗಳಿಸಿದ ರೈಡರ್‌ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು.

ಈ ಜಯದೊಂದಿಗೆ ತಮಿಳ್‌ ತಲೈವಾಸ್‌ 20 ಪಂದ್ಯಗಳಿಂದ 40 ಪಾಯಿಂಟ್‌ ಬಗಲಿಗೆ ಹಾಕಿಕೊಂಡಿದ್ದು ‘ಬಿ’ ವಲಯದ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 21 ಪಂದ್ಯಗಳಿಂದ 56 ಪಾಯಿಂಟ್ ಗಳಿಸಿರುವ ಮುಂಬಾ ‘ಎ’ ವಲಯದ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಪಂದ್ಯದ ಆರಂಭದಿಂದಲೇ ಉಭಯ ತಂಡದವರು ಸಮಬಲದ ಹೋರಾಟ ಮಾಡಿದರು. ಅನೂಪ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಮುಂಬಾ ಒತ್ತಡದಲ್ಲಿದ್ದರೂ ಪಂದ್ಯವನ್ನು ಕೈಚೆಲ್ಲಲು ಸಿದ್ಧ ಇರಲಿಲ್ಲಿ. ದರ್ಶನ್‌ ಕಾಡಿಯನ್‌ ಮತ್ತು ಶ್ರೀಕಾಂತ್ ಒಟ್ಟು 15 ಪಾಯಿಂಟ್‌ಗಳನ್ನು ಕಲೆ ಹಾಕಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.

ಹೀಗಾಗಿ ಪ್ರೇಕ್ಷಕರು ಪ್ರತಿ ಕ್ಷಣವನ್ನು ಆನಂದಿಸಿದರು. ಪ್ರಥಮಾರ್ಧದಲ್ಲಿ ಮುಂಬಾ ತಂಡ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. 15–18ರ ಹಿನ್ನಡೆಯೊಂದಿಗೆ ವಿರಾ ಮಕ್ಕೆ ತೆರಳಿದ ತಲೈವಾಸ್ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. ನಿರಂತರ ಪಾಯಿಂಟ್‌ಗಳನ್ನು ಹೆಕ್ಕಿ ಮುನ್ನಡೆಯಿತು.

ಆರಂಭಿಕ ಮುನ್ನಡೆ
ಮೊದಲ ಮೂರು ರೈಡ್‌ಗಳಲ್ಲಿ ಮೂರು ಪಾಯಿಂಟ್ ಹೆಕ್ಕಿದ ಅಜಯ್ ಠಾಕೂರ್ ಒಂದು ಹಂತದಲ್ಲಿ ತಂಡ 5–1ರ ಮುನ್ನಡೆಗೆ ಕಾರಣರಾದರು. ಆದರೆ ಆರನೇ ನಿಮಿಷದಲ್ಲಿ ದರ್ಶನ್ ಕಾಡಿಯನ್ ಮಾಡಿದ ಅಮೋಘ ರೈಡ್‌ನಿಂದ ಮುಂಬಾದ ಹಿನ್ನಡೆ 6–7ಕ್ಕೆ ಇಳಿಯಿತು. ನಂತರ ನಿರಂತರ ಐದು ಪಾಯಿಂಟ್‌ಗಳನ್ನು ಗಳಿಸಿ ಮುಂಬಾ 10–7ರ ಮುನ್ನಡೆ ಸಾಧಿಸಿತು.

ಮತ್ತೊಂದು ಪಂದ್ಯದಲ್ಲಿ ದಬಂಗ್‌ ದೆಲ್ಲಿ ತಂಡ ಜೈಪುರ್ ಪಿಂಕ್‌ ಪ್ಯಾಂಥರ್ಸ್ ಎದುರು 35–34ರಿಂದ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.