ADVERTISEMENT

ಮುಂಬೈಗೆ ಇನಿಂಗ್ಸ್ ಮುನ್ನಡೆ

ರಣಜಿ: ವಾಸೀಮ್ ಜಾಫರ್ ಶತಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2013, 19:59 IST
Last Updated 27 ಜನವರಿ 2013, 19:59 IST
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾನುವಾರ ಶತಕ ಗಳಿಸಿದ ಮುಂಬೈ ತಂಡದ ವಾಸೀಮ್ ಜಾಫರ್ -ಪಿಟಿಐ ಚಿತ್ರ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾನುವಾರ ಶತಕ ಗಳಿಸಿದ ಮುಂಬೈ ತಂಡದ ವಾಸೀಮ್ ಜಾಫರ್ -ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್ ವಾಸೀಮ್ ಜಾಫರ್ ಗಳಿಸಿದ ದಾಖಲೆಯ ಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಗಳಿಸಿದೆ.

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ಪ್ರಥಮ ಇನಿಂಗ್ಸ್‌ನಲ್ಲಿ ಗಳಿಸಿದ್ದ 148 ರನ್‌ಗಳನ್ನು ಆತಿಥೇಯರು ಸುಲಭವಾಗಿ ದಾಟಿದರು. ಈ ತಂಡ ಭಾನುವಾರದ ದಿನದಾಟದ ಅಂತ್ಯಕ್ಕೆ 94 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆ ಹಾಕಿದೆ. ಭಾನುವಾರದ ಆಟದ ಅಂತ್ಯಕ್ಕೆ ಈ ತಂಡ ಎಂಟು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿತ್ತು.

ಜಾಫರ್ ದಾಖಲೆ: ರಣಜಿ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆಯನ್ನು ಜಾಫರ್ ಈ ಪಂದ್ಯದಲ್ಲಿ ಮಾಡಿದರು.ಈ ಬಲಗೈ ಬ್ಯಾಟ್ಸ್‌ಮನ್ 246 ಎಸೆತಗಳಲ್ಲಿ 132 ರನ್ ಗಳಿಸಿದರು. ಇದರಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ. ಜಾಫರ್ ರಣಜಿಯಲ್ಲಿ ಗಳಿಸಿದ 32ನೇ ಶತಕ ಇದಾಗಿದೆ. ಅಜಯ್ ಶರ್ಮ (31), ಅಮೋಲ್ ಮುಜುಮ್‌ದಾರ್ (28), ರಾಜಸ್ತಾನದ ಹೃಷಿಕೇಶ್ ಕಾನಿಟ್ಕರ್ (28) ಹಾಗೂ ಅಮರ್‌ಜಿತ್ ಕೈಪೆ (27) ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಲಿಟಲ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ (22, 43ಎಸೆತ, 3 ಬೌಂಡರಿ) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರನ್ ಕದಿಯಲು ಅವಸರಿಸಿ ರನ್ ಔಟ್ ಆದರು. ಹಿಕೆನ್ ಷಹಾ (ಬ್ಯಾಟಿಂಗ್ 41, 84ಎಸೆತ, 5ಬೌಂಡರಿ) ಮುಂಬೈ ತಂಡವನ್ನು ಮೊತ್ತವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ನೆರವಾದರು. ಸೌರಾಷ್ಟ್ರದ ಧರ್ಮೇಂದ್ರ ಸಿನ್ಹಾ ಜಡೇಜ ಎರಡು ವಿಕೆಟ್ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ 75.3 ಓವರ್‌ಗಳಲ್ಲಿ  148. ಮುಂಬೈ 94 ಓವರ್‌ಗಳಲ್ಲಿ 6 ವಿಕೆಟ್‌ಗೆ 287. (ವಾಸೀಮ್ ಜಾಫರ್ 132, ಕೌಸ್ತುಬ್ ಪವಾರ್ 21, ಸಚಿನ್ ತೆಂಡೂಲ್ಕರ್ 22, ಹಿಕೆನ್ ಷಾ ಬ್ಯಾಟಿಂಗ್ 41; ಸಿದ್ಧಾರ್ಥ ತ್ರಿವೇದಿ 37ಕ್ಕೆ1, ಧರ್ಮೆಂದ್ರ ಜಡೇಜ 96ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.