ADVERTISEMENT

ಮುನ್ನಡೆಗೆ ಕೊಹ್ಲಿ ಬಳಗ ತವಕ

ಕ್ರಿಕೆಟ್: ತಿರುಗೇಟು ನೀಡುವ ವಿಶ್ವಾಸದಲ್ಲಿ ಜಿಂಬಾಬ್ವೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 19:59 IST
Last Updated 25 ಜುಲೈ 2013, 19:59 IST
ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ 	-ಎಪಿ ಚಿತ್ರ
ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ -ಎಪಿ ಚಿತ್ರ   

ಹರಾರೆ (ಪಿಟಿಐ): ಆತಿಥೇಯ ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಲಭಿಸಿದ ಸುಲಭ ಜಯದಿಂದ ಖುಷಿಯಾಗಿರುವ ಭಾರತ ತಂಡದವರು ಗೆಲುವಿನ ನಾಗಾಲೋಟ ಮುಂದುವರಿಸುವ ತವಕದಲ್ಲಿದ್ದಾರೆ. ಈ ಮೂಲಕ ಮುನ್ನಡೆ ಕಾಯ್ದುಕೊಂಡು ಸರಣಿ ಜಯಿಸಲು ಕಾತರರಾಗಿದ್ದಾರೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಶುಕ್ರವಾರ ಎರಡನೇ ಪಂದ್ಯ ನಡೆಯಲಿದ್ದು ವಿರಾಟ್ ಕೊಹ್ಲಿ ಬಳಗಕ್ಕೆ ತಿರುಗೇಟು ನೀಡುವ ವಿಶ್ವಾಸವನ್ನು ಜಿಂಬಾಬ್ವೆ ಹೊಂದಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಪಾಕಿಸ್ತಾನ ಮೂಲದ ಸಿಕಂದರ್ ರಾಜಾ  ಹಾಗೂ ವಸಿಮುಜಿ ಸಿಬಂದಾ ಸುಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಅವರು ಪ್ರವಾಸಿ ತಂಡದ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ್ದರು.

ಆದರೆ ಅನುಭವಿ ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಹಾಗೂ ರವೀಂದ್ರ ಜಡೇಜ ಅವರನ್ನು ಎದುರಿಸಲು ಜಿಂಬಾಬ್ವೆಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಮಾತ್ರ ಗಳಿಸಿದ್ದರು.
ಬಳಿಕ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಮೇಲೂ ಒತ್ತಡ ಹೇರುವಲ್ಲಿ ಆತಿಥೇಯ ತಂಡದ ಬೌಲರ್‌ಗಳು ಯಶಸ್ವಿಯಾಗಿದ್ದರು. ಆದರೆ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯುಡು ಅವರು ಯಾವುದೇ ಅಪಾಯಕ್ಕೆ ಆಸ್ಪದ ನೀಡಿರಲಿಲ್ಲ.

ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಸರಣಿಯಲ್ಲಿ ಮುನ್ನಡೆ ಗಳಿಸಿದ ಮೇಲೆ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಚೇತೇಶ್ವರ ಪೂಜಾರ, ಪರ್ವೇಜ್ ರಸೂಲ್, ಮೋಹಿತ್ ಶರ್ಮ ಅವರಿಗೆ ಸ್ಥಾನ ಅನುಮಾನ.

ಜಿಂಬಾಬ್ವೆ ತಂಡದ ನಾಯಕ ಬ್ರೆಂಡನ್ ಟೇಲರ್ ಅವರು ತಮ್ಮ ತಂಡದ ಮಧ್ಯಮ ಕ್ರಮಾಂಕದ   ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದಾರೆ.

ಸಚಿನ್, ರಾಬಿನ್‌ಗೆ ರಾಯುಡು ಧನ್ಯವಾದ: ಪದಾರ್ಪಣೆ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ ಅಂಬಟಿ ರಾಯುಡು ಅವರು ಸಚಿನ್ ತೆಂಡೂಲ್ಕರ್ ಹಾಗೂ ರಾಬಿನ್ ಸಿಂಗ್ ಅವರಿಗೆ ಧನ್ಯವಾದ ಹೇಳಿದ್ದಾರೆ.

`ಸಚಿನ್ ಹಾಗೂ ರಾಬಿನ್ ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಈ ಹಂತಕ್ಕೆ ಬಂದು ನಿಲ್ಲಲು ಕಾರಣ ಅವರು' ಎಂದು 27 ವರ್ಷ ವಯಸ್ಸಿನ ರಾಯುಡು ತಿಳಿಸಿದ್ದಾರೆ.

`ಒಂದು ದಿನ ರಾಷ್ಟ್ರೀಯ ತಂಡದಲ್ಲಿ ಆಡುತ್ತೇನೆ ಎಂಬ ವಿಶ್ವಾಸವಿತ್ತು. ಈಗ ಆ ಅವಕಾಶ ಲಭಿಸಿದೆ. ಇದು ನನ್ನ ಖುಷಿಗೆ ಕಾರಣವಾಗಿದೆ. ಒತ್ತಡಕ್ಕಿಂತ ಹೆಚ್ಚಾಗಿ ಭಾವುಕನಾಗಿದ್ದೇನೆ' ಎಂದು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಅವರು ನುಡಿದಿದ್ದಾರೆ.

ಚೊಚ್ಚಲ ಪಂದ್ಯದಲ್ಲಿ 84 ಎಸೆತಗಳನ್ನು ಎದುರಿಸಿದ್ದ ರಾಯುಡು 63 ರನ್ ಗಳಿಸಿದ್ದರು.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಆರ್.ವಿನಯ್ ಕುಮಾರ್, ಜಯದೇವ್ ಉನದ್ಕತ್ ಹಾಗೂ ಮೋಹಿತ್ ಶರ್ಮ.

ಜಿಂಬಾಬ್ವೆ: ಬ್ರೆಂಡನ್ ಟೇಲರ್ (ನಾಯಕ ಹಾಗೂ ವಿಕೆಟ್ ಕೀಪರ್), ಸಿಂಕದರ್ ರಾಜಾ,  ಟೆಂಡೈ ಚತಾರ, ಮೈಕೆಲ್ ಚಿನೋಯಾ, ಎಲ್ಟಾನ್ ಚಿಗುಂಬರ, ಗ್ರೇಮ್ ಕ್ರೆಮರ್, ಕೈಲ್ ಜಾರ್ವಿಸ್, ಟಿಮಿಸೆನ್ ಮರುಮಾ, ಹ್ಯಾಮಿಲ್ಟನ್ ಮಸಕಜಾ, ನಟ್ಸಾಯಿ ಮಶಾಂಗ್ವೆ, ಟಿನೊಟೆಂಡಾ ಮುಟೊಂಬೊಜಿ, ವಸಿಮುಜಿ ಸಿಬಂದಾ, ಪ್ರಾಸ್ಪರ್ ಉತ್ಸೆಯಾ, ಬ್ರಯಾನ್ ವಿಟೋರಿ, ಮಾಲ್ಕಂ ವಾಲರ್ ಹಾಗೂ ಸೀನ್ ವಿಲಿಯಮ್ಸ.  

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಟೆನ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT