ADVERTISEMENT

ಮೆಚ್ಚುವಂಥ ವಿಜಯ ಪಡೆದ ಪಾಕಿಸ್ತಾನ ತಂಡ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:00 IST
Last Updated 26 ಫೆಬ್ರುವರಿ 2011, 18:00 IST

ಕೊಲಂಬೊ (ಪಿಟಿಐ):ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ವಿಜಯ ಸಾಧ್ಯವಾಗಿಲ್ಲ ಎನ್ನುವ ನೋವನ್ನು ಮರೆಯುವ ಆಶಯದೊಂದಿಗೆ ಹೋರಾಟ ನಡೆಸಿದ ಆತಿಥೇಯ ಶ್ರೀಲಂಕಾದ ಗೆಲುವಿನ ಕನಸು ಮತ್ತೊಮ್ಮೆ ನುಚ್ಚುನೂರಾಯಿತು.

ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಪಾಕ್ ತಂಡದವರು ಶನಿವಾರ ಇಲ್ಲಿ ರೋಚಕ ಘಟ್ಟದಲ್ಲಿ ಕೊನೆಗೊಂಡ ವಿಶ್ವಕಪ್ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ 11 ರನ್‌ಗಳ ಅಂತರದಿಂದ ಸಿಂಹಳೀಯರ ಪಡೆಯನ್ನು ಪರಾಭವಗೊಳಿಸಿದರು. ತನ್ನ ಪಾಲಿನ ಐವತ್ತು ಓವರುಗಳಲ್ಲಿ ಶಾಹೀದ್ ಆಫ್ರಿದಿ ಬಳಗ ಏಳು ವಿಕೆಟ್ ಕಳೆದುಕೊಂಡು 277 ರನ್ ಸೇರಿಸಿತು. ಇದಕ್ಕೆ ತಕ್ಕ ಉತ್ತರ ನೀಡುವಲ್ಲಿ ವಿಫಲವಾದ ಲಂಕಾ 9 ವಿಕೆಟ್ ನಷ್ಟಕ್ಕೆ 266 ರನ್ ಮಾತ್ರ ಸೇರಿಸಿತು.

ಟಾಸ್ ಗೆದ್ದ ಶಾಹೀದ್ ಆಫ್ರಿದಿ ಅವರು ತಮ್ಮ ತಂಡದ ಬ್ಯಾಟಿಂಗ್ ಬಲದ ಮೇಲೆ ವಿಶ್ವಾಸ ಹೊಂದಿ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿದ್ದು ಅಚ್ಚರಿಯೇನಲ್ಲ. ಆರಂಭಿಕ ಆಟಗಾರ ಅಹ್ಮದ್ ಶೆಹ್ಜಾದ್ ಬೇಗ ವಿಕೆಟ್ ಒಪ್ಪಿಸಿದಾಗ ಪಾಕ್ ಸಂಕಷ್ಟದ ಸುಳಿಗೆ ಸಿಲುಕುತ್ತದೆ ಎನ್ನುವ ಅನುಮಾನ ಕಾಡಿತು. ಆದರೆ ಮೊಹಮ್ಮದ್ ಹಫೀಜ್ ಹಾಗೂ ಕಮ್ರನ್ ಅಕ್ಮಲ್ ಇನಿಂಗ್ಸ್ ಕಟ್ಟುವ ಕಾಯಕದಲ್ಲಿ ತೊಡಗಿದರು. ಆದರೂ ಅವರೂ ಆಘಾತ ಅನುಭವಿಸಿ ನಿರ್ಗಮಿಸಿದಾಗ ಆಸರೆಯಾಗಿ ನಿಂತಿದ್ದು ಯೂನಿಸ್ ಖಾನ್ (72; 76 ಎ., 4 ಬೌಂಡರಿ) ಹಾಗೂ ಔಟಾಗದೆ ಉಳಿದ ಮಿಸ್ಬಾ ಉಲ್ ಹಕ್ (83; 91 ಎ., 6 ಬೌಂಡರಿ). ಇವರಿಬ್ಬರೂ ಜೊತೆಯಾಗಿ ನಾಲ್ಕನೇ ವಿಕೆಟ್‌ನಲ್ಲಿ 108 ರನ್‌ಗಳನ್ನು ಕಲೆಹಾಕಿದರು.

ಇಂಥದೊಂದು ಮಹತ್ವದ ಜೊತೆಯಾಟವು ಪಾಕಿಸ್ತಾನವು ಇನ್ನೂರೈವತ್ತು ರನ್‌ಗಳ ಗಡಿಯನ್ನು ದಾಟಿ ವಿಶ್ವಾಸದಿಂದ ಬೀಗುವಂತೆ ಮಾಡಿತು. 5.54ರ ಸರಾಸರಿಯಲ್ಲಿ ರನ್ ಗಳಿಸಿದ ಪಾಕ್ ಆಗಲೇ ಜಯದ ಕನಸು ಕಂಡಿತು. ಗುರಿಯನ್ನು ಬೆನ್ನಟ್ಟುವುದು ಆರ್. ಪ್ರೇಮದಾಸಾ ಕ್ರೀಡಾಂಗಣದಲ್ಲಿ ಕಷ್ಟವೆನ್ನುವುದು ಸಿಂಹಳೀಯರಿಗೂ ಸ್ಪಷ್ಟವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿದಿ ಬಳಗವೇ ಭಾರಿ ಆಕ್ರಮಣಕಾರಿ ಆಗಲು ಅವಕಾಶ ಸಿಗದ ಅಂಗಳದಲ್ಲಿ ಇನ್ನೂರೈವತ್ತಕ್ಕೂ ಅಧಿಕ ಮೊತ್ತದ ಗುರಿ ಮುಟ್ಟುವುದು ಪ್ರವಾಹದ ವಿರುದ್ಧ ಈಜಿದಂಥ ಶ್ರಮದ ಕೆಲಸವೆಂದು ‘ಸಂಗಾ’ (49; 61 ಎ., 2 ಬೌಂಡರಿ, 1 ಸಿಕ್ಸರ್) ಅರಿತಿದ್ದರೂ, ತಮ್ಮ ತಂಡವನ್ನು ಸಂಕಷ್ಟದಿಂದ ಹೊರತರಬೇಕೆಂದು ಬೆವರು ಸುರಿಸಿದರು. ತಿಲಕರತ್ನೆ ದಿಲ್ಶಾನ್ (41; 55 ಎ., 5 ಬೌಂಡರಿ) ಕೂಡ ತಮ್ಮ ತಂಡದ ಮೊತ್ತ ಹೆಚ್ಚಿಸಲು ಶ್ರಮಿಸಿದರು. ಇವರಿಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದ್ದು ಆಫ್ರಿದಿ (10-0-34-4). ಇವರ ಪ್ರಭಾವಿ ಬೌಲಿಂಗ್ ಕಾರಣವಾಗಿಯೇ ಪಂದ್ಯದ ಮೇಲೆ ಪಾಕ್ ಬಿಗಿ ಹಿಡಿತ ಸಾಧಿಸಲು ಸಾಧ್ಯವಾಯಿತು.ಈ ಜಯದಿಂದ ಪಾಕ್ ತಂಡಕ್ಕೆ ಎರಡು ಪಾಯಿಂಟ್ ಲಭಿಸಿದವು.  
 

ಸ್ಕೋರು ವಿವರ
ಪಾಕಿಸ್ತಾನ: 50 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 277
ಅಹ್ಮದ್ ಶೆಹ್ಜಾದ್ ಸಿ ಕುಮಾರ ಸಂಗಕ್ಕಾರ ಬಿ ತಿಸಾರಾ ಪೆರೆರಾ  13
ಮೊಹಮ್ಮದ್ ಹಫೀಜ್ ರನ್‌ಔಟ್ (ಹೆರಾತ್/ಜಯವರ್ಧನೆ/ಸಂಗಕ್ಕಾರ/ಮುರಳೀಧರನ್)  32
ಕಮ್ರನ್ ಅಕ್ಮಲ್ ಸ್ಟಂಪ್ಡ್ ಕುಮಾರ ಸಂಗಕ್ಕಾರ ಬಿ ರಂಗನ ಹೆರಾತ್ 39
ಯೂನಿಸ್ ಖಾನ್ ಸಿ ಮಾಹೇಲ ಜಯವರ್ಧನೆ ಬಿ ರಂಗನ ಹೆರಾತ್ 72
ಮಿಸ್ಬಾ ಉಲ್ ಹಕ್ ಔಟಾಗದೆ  83
ಉಮರ್ ಅಕ್ಮಲ್ ಸಿ ತಿಲಕರತ್ನೆ ದಿಲ್ಶಾನ್ ಬಿ  ಮುರಳೀಧರನ್  10
ಶಾಹೀದ್ ಆಫ್ರಿದಿ ಸಿ ತಿಲಕರತ್ನೆ ದಿಲ್ಶಾನ್ ಬಿ ಮ್ಯಾಥ್ಯೂಸ್  16
ಅಬ್ದುಲ್ ರಜಾಕ್ ಸಿ ಚಾಮರ ಕಪುಗೆಡೆರಾ (ಬದಲಿ ಆಟಗಾರ) ಬಿ ತಿಸಾರಾ ಪೆರೆರಾ  03
ಇತರೆ: (ಲೆಗ್‌ಬೈ-4, ವೈಡ್-5)  09
ವಿಕೆಟ್ ಪತನ: 1-28 (ಅಹ್ಮದ್ ಶೆಹ್ಜಾದ್; 5.3); 2-76 (ಮೊಹಮ್ಮದ್ ಹಫೀಜ್; 13.1); 3-105 (ಕಮ್ರನ್ ಅಕ್ಮಲ್; 20.2); 4-213 (ಯೂನಿಸ್ ಖಾನ್; 40.5); 5-238 (ಉಮರ್ ಅಕ್ಮಲ್; 45.3); 6-267 (ಶಾಹೀದ್ ಆಫ್ರಿದಿ; 48.5); 7-277 (ಅಬ್ದುಲ್ ರಜಾಕ್; 49.6).
ಬೌಲಿಂಗ್: ನುವಾನ್ ಕುಲಶೇಖರ 10-1-64-0 (ವೈಡ್-1), ತಿಸಾರಾ ಪೆರೆರಾ 9-0-62-2 (ವೈಡ್-2), ಆ್ಯಂಗೆಲೊ ಮ್ಯಾಥ್ಯೂಸ್ 10-0-56-1, ಮುತ್ತಯ್ಯ ಮುರಳೀಧರನ್ 10-0-35-1 (ವೈಡ್-2), ರಂಗನ ಹೆರಾತ್ 10-0-46-2, ತಿಲಕರತ್ನೆ ದಿಲ್ಶಾನ್ 1-0-10-0

ಶ್ರೀಲಂಕಾ: 50 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 266
ಉಪುಲ್ ತರಂಗ ಸಿ ಶಾಹೀದ್ ಆಫ್ರಿದಿ ಬಿ ಮೊಹಮ್ಮದ್ ಹಫೀಜ್ 33
ತಿಲಕರತ್ನೆ ದಿಲ್ಶಾನ್ ಬಿ ಶಾಹೀದ್ ಆಫ್ರಿದಿ  41
ಕುಮಾರ ಸಂಗಕ್ಕಾರ ಸಿ ಅಹ್ಮದ್ ಶೆಹ್ಜಾದ್ ಬಿ ಶಾಹೀದ್ ಆಫ್ರಿದಿ  49
ಮಾಹೇಲ ಜಯವರ್ಧನೆ ಬಿ ಶೋಯಬ್ ಅಖ್ತರ್  02
ತಿಲಾನ್ ಸಮರವೀರ ಸ್ಟಂಪ್ಡ್ ಕಮ್ರನ್ ಅಕ್ಮಲ್ ಬಿ ಆಫ್ರಿದಿ  01
ಚಾಮರ ಸಿಲ್ವಾ ಸ್ಟಂಪ್ಡ್ ಕಮ್ರನ್ ಅಕ್ಮಲ್ ಬಿ ಅಬ್ದುರ್ ರೆಹಮಾನ್ 57
ಆ್ಯಂಗೆಲೊ ಮ್ಯಾಥ್ಯೂಸ್ ಸಿ ಅಹ್ಮದ್ ಶೆಹ್ಜಾದ್ ಬಿ ಶಾಹೀದ್ ಆಫ್ರಿದಿ 18
ತಿಸಾರಾ ಪೆರೆರಾ ಬಿ ಶೋಯಬ್ ಅಖ್ತರ್  08
ನುವಾನ್ ಕುಲಶೇಖರಾ ಸಿ ಉಮರ್ ಅಕ್ಮಲ್ ಬಿ ಉಮರ್ ಗುಲ್ 24
ರಂಗನ ಹೆರಾತ್ ಔಟಾಗ ೆ 04
ಮುತ್ತಯ್ಯ ಮುರಳೀಧರನ್ ಔಟಾಗದೆ  00
ಇತರೆ: (ಬೈ-1, ಲೆಗ್‌ಬೈ-10, ವೈಡ್-16, ನೋಬಾಲ್-2)  29
ವಿಕೆಟ್ ಪತನ: 1-76 (ಉಪುಲ್ ತರಂಗ; 14.2); 2-88 (ತಿಲಕರತ್ನೆ ದಿಲ್ಶಾನ್; 17.3); 3-95 (ಮಾಹೇಲ ಜಯವರ್ಧನೆ; 20.2); 4-96 (ತಿಲಾನ್ ಸಮರವೀರ; 21.2); 5-169 (ಕುಮಾರ ಸಂಗಕ್ಕಾರ); 6-209 (ಆ್ಯಂಗೆಲೊ ಮ್ಯಾಥ್ಯೂಸ್; 43.4); 7-232 (ತಿಸಾರಾ ಪೆರೆರಾ; 45.5); 8-233 (ಚಾಮರ ಸಿಲ್ವಾ; 46.1); 9-265 (ನುವಾನ್ ಕುಲಶೇಖರಾ; 49.5).
ಬೌಲಿಂಗ್: ಶೋಯಬ್ ಅಖ್ತರ್ 10-0-42-2, ಅಬ್ದುಲ್ ರಜಾಕ್ 5-1-23-0, ಉಮರ್ ಗುಲ್ 9-0-60-1 (ನೋಬಾಲ್-1, ವೈಡ್-2), ಮೊಹಮ್ಮದ್ ಹಫೀಜ್ 6-0-33-1 (ವೈಡ್-2), ಶಾಹೀದ್ ಆಫ್ರಿದಿ 10-0-34-4 (ವೈಡ್-1), ಅಬ್ದುರ್ ರೆಹಮಾನ್ 10-1-63-1  (ನೋಬಾಲ್-1, ವೈಡ್-3)   
ಫಲಿತಾಂಶ:  ಪಾಕಿಸ್ತಾನಕ್ಕೆ 11 ರನ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT