ADVERTISEMENT

ಮೊಹಾಲಿಯಲ್ಲಿ ಆವರಿಸಿದೆ ಕ್ರಿಕೆಟ್ ಮೋಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 19:00 IST
Last Updated 28 ಮಾರ್ಚ್ 2011, 19:00 IST
ಮೊಹಾಲಿಯಲ್ಲಿ ಆವರಿಸಿದೆ ಕ್ರಿಕೆಟ್ ಮೋಹ
ಮೊಹಾಲಿಯಲ್ಲಿ ಆವರಿಸಿದೆ ಕ್ರಿಕೆಟ್ ಮೋಹ   

ಮೊಹಾಲಿ (ಪಿಟಿಐ): ಪಂಜಾಬ್‌ನ ಈ ಮೋಹಕ ನಗರಿಯಲ್ಲಿ ಕ್ರಿಕೆಟ್ ಪ್ರೀತಿ ತಾರಕಕ್ಕೆ ಏರಿದ್ದು, ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಫೇಮಸ್’ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಬುಧವಾರ ನಡೆಯುವ ಈ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಟಿಕೆಟ್ ದೊರೆಯದಿದ್ದರೂ ಅಭಿಮಾನಿಗಳ ಉತ್ಸಾಹ ಒಂದಿನಿತೂ ಕುಂದಿಲ್ಲ.

ಈ ಸೆಮಿಫೈನಲ್ ಪಂದ್ಯಕ್ಕೆ ಹಲವು ಜನ ವಿಐಪಿಗಳು ಸಾಕ್ಷಿಯಾಗಲು ಆಗಮಿಸುವುದರಿಂದ ಭಾರಿ ಬಿಗಿಭದ್ರತೆಯನ್ನು ಒದಗಿಸಲಾಗಿದ್ದು, ಮೊಹಾಲಿ ಅಂಗಳ ಏಳು ಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ. ವಾಘಾ-ಅಟ್ಟಾರಿ ಗಡಿಯ ಎರಡೂ ಕಡೆ ಜನಪ್ರವಾಹವೇ ಹರಿದಾಡುತ್ತಿದೆ. ದೇಶಪ್ರೇಮದ ಘೋಷಣೆಗಳು ಇಬ್ಬದಿಯಲ್ಲೂ ಮೊಳಗುತ್ತಿವೆ. ವಾಘಾ (ಪಾಕಿಸ್ತಾನ) ಹಾಗೂ ಅಟ್ಟಾರಿ (ಭಾರತ) ಗಡಿಯಲ್ಲಿ ಭಾನುವಾರ ನಡೆದ ಧ್ವಜ ವಂದನೆಗೆ ಭಾರಿ ಪ್ರಮಾಣದ ಜನ ಸಾಕ್ಷಿಯಾದರು. ಗಡಿಗುಂಟ ಎತ್ತ ನೋಡಿದರೂ ಜನ ಪ್ರವಾಹವೇ ಕಾಣುತ್ತಿತ್ತು. ಎರಡೂ ದೇಶಗಳ ಬಾವುಟಗಳು ಬಾನಾಡಿಯಾಗಿ ಪಟ-ಪಟಿಸುತ್ತಿದ್ದವು.

ಒಂದೆಡೆ ‘ಹಿಂದುಸ್ತಾನ್ ಜಿಂದಾಬಾದ್, ಹಿಂದುಸ್ತಾನ್ ಜೀತೆಗಾ, ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದರೆ, ಇನ್ನೊಂದೆಡೆ ‘ಪಾಕಿಸ್ತಾನ್ ಜಿಂದಾಬಾದ್’ ಕೂಗು ಕೇಳಿಬಂತು. ಪ್ರಧಾನ ರಂಗಸಜ್ಜಿಕೆಗೆ ಕ್ರಿಕೆಟ್ ಅಡಿ ಇಟ್ಟಿದ್ದರಿಂದ ರಾಜಕೀಯ ಸೇರಿದಂತೆ ಎಲ್ಲ ಸಂಗತಿಗಳೂ ಪರದೆ ಹಿನ್ನೆಲೆಗೆ ಸರಿದು ಹೋಗಿವೆ.

ಎಸ್‌ಪಿಜಿ, ಎನ್‌ಎಸ್‌ಜಿ, ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆ ಸೇರಿದಂತೆ ಬಹು ಪದರಿನ ಸುರಕ್ಷಾ ವ್ಯವಸ್ಥೆಯನ್ನು ಪಂದ್ಯ ನಡೆಯುವ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣಕ್ಕೆ ಕಲ್ಪಿಸಲಾಗಿದೆ. ‘ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಸೇರಿದಂತೆ ಹಲವು ಜನ ಗಣ್ಯಾತಿಗಣ್ಯರು ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅತ್ಯಂತ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದೇವೆ’ ಎಂದು ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ಜಿಪಿಎಸ್ ಭುಲ್ಲಾರ್ ತಿಳಿಸಿದ್ದಾರೆ.

ಕ್ರೀಡಾಂಗಣದ ಸುತ್ತ ವಿಮಾನ ನಿರೋಧಕ ಗನ್‌ಗಳನ್ನು ಅಳವಡಿಸಲಾಗಿದ್ದು, ಎನ್‌ಎಸ್‌ಜಿ ಕಮಾಂಡೋಗಳು ಕ್ರೀಡಾಂಗಣವನ್ನು ಸುತ್ತುವರಿಯಲಿದ್ದಾರೆ. ವಿಶೇಷ ಸುರಕ್ಷಾ ಪಡೆ ಕೂಡ ಭದ್ರತಾ ವ್ಯವಸ್ಥೆಗೆ ಬಲ ತುಂಬಲಿದೆ. 2008ರ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹಳಸಿಹೋಗಿತ್ತು. ಕ್ರಿಕೆಟ್ ಸಂಬಂಧ ಕೂಡ ಕಡಿದುಹೋಗಿತ್ತು. ಸಾಕಷ್ಟು ಬಿಡುವಿನ ನಂತರ ಮತ್ತೆ ಬದ್ಧ ಎದುರಾಳಿಗಳು ಮುಖಾಮುಖಿ ಆಗುತ್ತಿದ್ದು ಕ್ರಿಕೆಟ್ ಗಾನ ಮುಗಿಲು ಮುಟ್ಟಿದೆ. ಎಲ್ಲೆಡೆ ಅಮಿತೋತ್ಸಾಹದ ಅಲೆಗಳು ಎದ್ದಿವೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳೂ ಮೊಹಾಲಿಗೆ ದಾಂಗುಡಿ ಇಡುತ್ತಿದ್ದಾರೆ. ಅಲ್ಲಿಯ ಕ್ರಿಕೆಟ್ ಮಂಡಳಿ ಅಧಿಕಾರಿ ತಾರಿಕ್ ಹಕೀಮ್ ತಮ್ಮ ಪತ್ನಿ ಹಾಗೂ ಪುತ್ರನ ಜೊತೆ ಆಗಲೇ ಆಗಮಿಸಿದ್ದಾರೆ. ‘ಪಂದ್ಯದ ಬಗೆಗೆ ಎಷ್ಟೊಂದು ಕುತೂಹಲವಿದೆ ಎಂದರೆ ಪಾಕಿಸ್ತಾನದಲ್ಲಿ ಎಲ್ಲರೂ ಮೊಹಾಲಿಗೆ ಬರಲು ತವಕಿಸುತ್ತಿದ್ದಾರೆ’ ಎನ್ನುತ್ತಾರೆ ತಾರಿಕ್.

ತಾರಿಕ್ ಅವರ ಪತ್ನಿಯ ಅಜ್ಜ ಜಲಂಧರ್ ಮೂಲದವರು. ಬ್ರಿಟಿಷ್ ಆಡಳಿತದ ಕಾಲಕ್ಕೆ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ‘ನಾನು ಎರಡನೇ ಸಲ ಭಾರತಕ್ಕೆ ಬರುತ್ತಿದ್ದು, ವಿಭಿನ್ನವಾದ ಅನುಭವವಾಗುತ್ತಿದೆ’ ಎಂದು ತಾರಿಕ್ ಪತ್ನಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.