ADVERTISEMENT

ಯುಡಿಆರ್‌ಎಸ್ ವ್ಯವಸ್ಥೆ: ಶಾಹೀದ್ ಅಫ್ರಿದಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಕರಾಚಿ (ಪಿಟಿಐ): ಅಂಪೈರ್ ತೀರ್ಪಿನ ಪುನರ್‌ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ಅಡಿಯಲ್ಲಿ ತೀರ್ಪು ಪರಿಶೀಲನೆಗೆ ಮನವಿ ಮಾಡಿಕೊಳ್ಳಲು ಇನ್ನಷ್ಟು ಹೆಚ್ಚಿನ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಅಫ್ರಿದಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯನ್ನು ಕೇಳಿಕೊಂಡಿದ್ದಾರೆ.

ಯುಡಿಆರ್‌ಎಸ್‌ನಿಂದ ಹಲವು ತಂಡಗಳು ಲಾಭ ಪಡೆದಿದ್ದು, ನೈಜ ತೀರ್ಪು ಪಡೆಯಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಯುಡಿಆರ್‌ಎಸ್ ಒಂದು ಧನಾತ್ಮಕ ವ್ಯವಸ್ಥೆಯಾಗಿದ್ದು, ಟೂರ್ನಿ ಮುಗಿದ ನಂತರವೂ ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

ಕ್ರೀಡಾಂಗಣದ ದೋಷಗಳನ್ನು ಈ ವ್ಯವಸ್ಥೆ ಹೋಗಲಾಡಿಸಲಿದ್ದು, ಬಹುತೇಕ ತಂಡಗಳು ಇದರಿಂದ ತೃಪ್ತವಾಗಿವೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಭಾರತ ತಂಡದ ನಾಐಕ ಮಹೇಂದ್ರ ಸಿಂಗ್ ದೋನಿ ಈ ವ್ಯವಸ್ಥೆ ಕುರಿತಾಗಿ ಅಸಮಾಧಾನ ಹೊಂದಿದ್ದಾರೆ. ಯುಡಿಆರ್‌ಎಸ್‌ನಿಂದ ಅಷ್ಟಾಗಿ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆನಡಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಯುಡಿಆರ್‌ಎಸ್‌ನಿಂದ ಸಾಕಷ್ಟು ಪ್ರಯೋಜನ ಪಡೆದಿದೆ. ಅಂಪೈರ್‌ಗಳಾದ ಡೆರೆಲ್ ಹಾರ್ಪರ್ ಹಾಗೂ ನಿಗೆಲ್ ಲಾಂಗ್ ಅವರು ನೀಡಿದ್ದ ತೀರ್ಪುಗಳನ್ನು ಪುನರ್ ಪರಿಶೀಲನೆ ಸಂದರ್ಭದಲ್ಲಿ ರದ್ದುಗೊಳಿಸಲಾಗಿತ್ತು. ಮೂರು ಪಂದ್ಯಗಳಿಂದ 14 ವಿಕೆಟ್ ಕಬಳಿಸಿರುವ ಈ ಆಲ್ ರೌಂಡರ್, ತಾವು ಬೌಲರ್ ಆಗಿ ನಿರ್ವಹಿಸಿದ ಪಾತ್ರದ ಬಗೆಗೆ ತೃಪ್ತರಾಗಿದ್ದಾರೆ.

‘ಉಳಿದ ಬೌಲರ್‌ಗಳೂ ಚೆನ್ನಾಗಿಯೇ ಬೌಲ್ ಮಾಡಿದ್ದಾರೆ. ಅವರಿಗೆ ಅದೃಷ್ಟ ಕೈಕೊಟ್ಟರೆ, ನನ್ನ ಕೈ ಹಿಡಿಯಿತು. ಆದ್ದರಿಂದಲೇ ಅಧಿಕ ವಿಕೆಟ್ ಪಡೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.