ADVERTISEMENT

ಯುವರಾಜ್ ಸಿಂಗ್ ಇಂದು ತವರಿಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಲಂಡನ್‌ನಿಂದ ಸೋಮವಾರ ಭಾರತಕ್ಕೆ ಮರಳಲಿದ್ದಾರೆ.

`ಕೊನೆಗೂ ಆ ದಿನ ಬಂದೇಬಿಟ್ಟಿದೆ. ನನ್ನ ತವರು ನಾಡಿಗೆ ಹೋಗುತ್ತಿದ್ದೇನೆ. ಮೊದಲು ನನ್ನ ಗೆಳೆಯರನ್ನು, ಕುಟುಂಬದವರನ್ನು ನೋಡಬೇಕು. ಎಲ್ಲಕ್ಕಿಂತ ಮೊದಲು ನನ್ನ ಭಾರತಕ್ಕೆ ತೆರಳಬೇಕು. ಮೇರಾ ಭಾರತ್ ಮಹಾನ್~ ಎಂದು `ಯುವಿ~ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅಮೆರಿಕದಲ್ಲಿ ಕಿಮೋಥೆರಪಿ ಚಿಕಿತ್ಸೆ ಪಡೆದಿದ್ದ ಯುವರಾಜ್ ಇನ್ನೂ ಕೆಲ ತಿಂಗಳುಗಳ ಕಾಲ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕಳೆದು ತಿಂಗಳಷ್ಟೇ ಆಸ್ಟ್ರತ್ರೆಯಿಂದ ಬಿಡುಗಡೆಯಾಗಿದ್ದ ಅವರು ಬಳಿಕ ಲಂಡನ್‌ಗೆ ತೆರಳಿದ್ದರು.

ದೇಶಕ್ಕೆ ಮರಳಿದ ನಂತರ ಮುಂದಿನ ಯೋಜನೆ, ಆರೋಗ್ಯದ ಸ್ಥಿತಿ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ. `ಬಾಸ್ಟನ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್~ ಆಸ್ಪತ್ರೆಯಲ್ಲಿ ಜನವರಿಯಿಂದ ಮಾರ್ಚ್‌ವರೆಗೆ ಈ ಎಡಗೈ ಬ್ಯಾಟ್ಸ್‌ಮನ್ ಚಿಕಿತ್ಸೆ ಪಡೆದಿದ್ದರು.

ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಜಾಬ್‌ನ 30 ವರ್ಷದ ಈ ಆಟಗಾರ ಕಳೆದ ನವೆಂಬರ್‌ನಲ್ಲಿ ಆಡಿದ್ದ ಪಂದ್ಯವೇ ಕೊನೆಯದಾಗಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.