ADVERTISEMENT

ಯೂತ್‌ ಬಾಕ್ಸಿಂಗ್‌: ಚಿನ್ನ ಗೆದ್ದುಕೊಂಡ ಜಾನಿ, ಸಾಕ್ಷಿ

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ರೋಹ್ಟಕ್‌: ಹರಿಯಾಣ ಹಾಗೂ ಸರ್ವಿಸಸ್ ಸ್ಪೋರ್ಟ್ಸ್‌ ಕಂಟ್ರೋಲ್ ಬೋರ್ಡ್‌ (ಎಸ್‌ಎಸ್‌ಸಿಬಿ) ತಂಡದ ಬಾಕ್ಸರ್‌ಗಳು ಇಲ್ಲಿ ನಡೆದ ಎರಡನೇ ಯೂತ್ ನ್ಯಾಷನಲ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ್ದಾರೆ.

ಸ್ಪರ್ಧೆ ಒಡ್ಡಿದ್ದ ಆರು ವಿಭಾಗಗಳಲ್ಲೂ ಹರಿಯಾಣದ ಸ್ಪರ್ಧಿಗಳು ಚಿನ್ನ ಗೆದ್ದುಕೊಂಡಿದ್ದರೆ, ಎಸ್‌ಎಸ್‌ಸಿಬಿ ಒಂಬತ್ತು ಪದಕ ಗೆದ್ದು ಸಂಭ್ರಮಿಸಿದೆ.

ಹರಿಯಾಣದ ಜಾನಿ 60ಕೆ.ಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಫೈನಲ್‌ ಬೌಟ್‌ನಲ್ಲಿ 5–0ರಲ್ಲಿ ಅವರು ಎದುರಾಳಿಯನ್ನು ಮಣಿಸಿದರು. 2017ರ ಯೂತ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಾನಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು.

ADVERTISEMENT

‘ಹೋದ ವರ್ಷ ಫೈನಲ್‌ನಲ್ಲಿ ಸೋತಿದ್ದೆ. ಕಹಿ ಮರೆತು ಈಗ ಚಿನ್ನ ಗೆದ್ದುಕೊಂಡಿದ್ದೇನೆ. ರಾಷ್ಟ್ರೀಯ ಚಾಂಪಿಯನ್ ಆಗಲು ನಾನು ಬಹಳಷ್ಟು ಶ್ರಮ ಹಾಕಿದ್ದೇನೆ’ ಎಂದು ಜಾನಿ ಹೇಳಿದ್ದಾರೆ.

57ಕೆ.ಜಿ ವಿಭಾಗದಲ್ಲಿ ಸಾಕ್ಷಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ಯೂತ್ ಬಾಕ್ಸಿಂಗ್‌ನಲ್ಲಿಯೂ ಅವರು ಚಿನ್ನ ಜಯಿಸಿದ್ದರು.

ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಇನ್ನೊಬ್ಬ ಆಟಗಾರ್ತಿ ನಿಹಾರಿಕಾ ಗೋನೆಲ್ಲಾ 75ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಉತ್ತರಪ್ರದೇಶದ ಅಸ್ತಾ ಪಾಷ್ವಾ ಚಿನ್ನ ಗೆದ್ದರು.

ಪುರುಷರ ವಿಭಾಗದಲ್ಲಿ ಎಸ್‌ಎಸ್‌ಸಿಬಿ ತಂಡದ ಬಾಕ್ಸರ್‌ಗಳು ಮಿಂಚಿದ್ದಾರೆ. 81ಕೆ.ಜಿ ವಿಭಾಗದಲ್ಲಿ ಸತ್ಯೇಂದ್ರ ಸಿಂಗ್ ಚಿನ್ನ ಗೆದ್ದರು. ಅವರು ಫೈನಲ್‌ನಲ್ಲಿ ರೋನಕ್ ಎದುರು ಜಯದಾಖಲಿಸಿದ್ದಾರೆ.

ಎಸ್‌.ವರಣ್‌ ಸಿಂಗ್‌ 4–1ರಲ್ಲಿ ಆಂಧ್ರದ ಸಾಯಿ ಕುಮಾರ್‌ ಎದುರು ಗೆದ್ದರು. ಅಂಕಿತ್‌ ಹರಿಯಾಣದ ಅಕ್ಷಯ್‌ ಕುಮಾರ್‌ಗೆ ಸೋಲುಣಿಸಿದರು. ಆಕಾಶ್‌ 5–0ರಲ್ಲಿ ಹರಿಯಾಣದ ಮೋಹಿತ್ ವಿರುದ್ಧ ಗೆದ್ದರು.

ಸೂಪರ್ ಹೆವಿವೇಟ್‌ ವಿಭಾಗದಲ್ಲಿ (91ಕೆ.ಜಿ) ಅಮನ್‌ ಚಿನ್ನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.