ಡಾನೆಸ್ಕ್ (ರಾಯಿಟರ್ಸ್): ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಅದ್ಭುತ ಆಟದ ಮೂಲಕ ಪೋರ್ಚುಗಲ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವರೇ? ಕಳೆದ ಬಾರಿಯ ಚಾಂಪಿಯನ್ ಹಾಗೂ ವಿಶ್ವಚಾಂಪಿಯನ್ ಎನಿಸಿರುವ ಸ್ಪೇನ್ ಫೈನಲ್‌ಗೆ ಅರ್ಹತೆ ಗಿಟ್ಟಿಸಲಿದೆಯೇ?
ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಬುಧವಾರ ರಾತ್ರಿ ಉತ್ತರ ಲಭಿಸಲಿದೆ. ಇಲ್ಲಿನ ಡಾನ್‌ಬಾಸ್ ಅರೆನಾ ಕ್ರೀಡಾಂಗಣದಲ್ಲಿ ನಡೆಯುವ `ಯೂರೊ 2012~ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ಹಾಗೂ ಸ್ಪೇನ್ ಎದುರಾಗಲಿದ್ದು, ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿದೆ.
ಈ ಪಂದ್ಯ ಒಂದು ರೀತಿಯಲ್ಲಿ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಸ್ಪೇನ್ ಆಟಗಾರರ ನಡುವಿನ ಹೋರಾಟವಾಗಿ ಪರಿಣಮಿಸಿದೆ. ಸ್ಪೇನ್ ಕೋಚ್ ವಿನ್ಸೆಂಟ್ ಡೆಲ್ ಬಾಸ್ಕ್ ಎದುರಾಳಿ ತಂಡದ ರೊನಾಲ್ಡೊ ಅವರನ್ನು ನಿಯಂತ್ರಿಸಲು ಕೆಲವೊಂದು ವಿಶೇಷ ಯೋಜನೆಗಳನ್ನು ರೂಪಿಸಿರುವುದು ಖಚಿತ. `ರೊನಾಲ್ಡೊ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ~ ಎಂದು ಡೆಲ್ ಬಾಸ್ಕ್ ತಿಳಿಸಿದ್ದಾರೆ. 2010ರ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಸ್ಪೇನ್ ತಂಡ ಪೋರ್ಚುಗಲ್ ವಿರುದ್ಧ ಜಯ ಸಾಧಿಸಿತ್ತು. ಅಂದು ರೊನಾಲ್ಡೊ ಅವರನ್ನು ಕಟ್ಟಿಹಾಕುವಲ್ಲಿ ಸ್ಪೇನ್ ಆಟಗಾರರು ಯಶಸ್ವಿಯಾಗಿದ್ದರು.
2008ರ ಯೂರೊ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಸ್ಪೇನ್ 2010ರ ವಿಶ್ವಕಪ್ ಟೂರ್ನಿಯ ಕಿರೀಟವನ್ನೂ ಮುಡಿಗೇರಿಸಿಕೊಂಡಿತ್ತು. ಇದೀಗ ಸತತ ಮೂರನೇ ಪ್ರಮುಖ ಪ್ರಶಸ್ತಿಯ ಮೇಲೆ ಕಣ್ಣಿಟ್ಟುಕೊಂಡು ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿದೆ. ಸ್ಪೇನ್ ತಂಡ ಕ್ವಾರ್ಟರ್ ಫೈನಲ್‌ನಲ್ಲಿ 2-0ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ್ದರೆ, ಪೋರ್ಚುಗಲ್ 1-0ರಲ್ಲಿ ಜೆಕ್ ಗಣರಾಜ್ಯ ವಿರುದ್ಧ ಜಯ ಪಡೆದಿತ್ತು.
ಈ ಪಂದ್ಯದಲ್ಲಿ ಎರಡೂ ತಂಡಗಳು ವಿಭಿನ್ನ ಶೈಲಿಯಲ್ಲಿ ಆಡಲಿವೆ. ಚೆಂಡನ್ನು ಅಧಿಕ ಸಮಯ ತಮ್ಮ ನಿಯಂತ್ರಣದಲ್ಲಿಟ್ಟು ಎದುರಾಳಿ ಆಟಗಾರರನ್ನು ಹತಾಶೆಗೆ ಒಳಗಾಗುವಂತೆ ಮಾಡುವುದು ಸ್ಪೇನ್ ತಂಡದ ಯೋಜನೆ. ಆದರೆ ಪೋರ್ಚುಗಲ್ ಆಕ್ರಮಣಕಾರಿ ಆಟದ ಮೊರೆಹೋಗಲಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಲಿದೆ.
ರೊನಾಲ್ಡೊ ಅಲ್ಲದೆ, ನಾನಿ, ರೌಲ್ ಮಿರೆಲೆಸ್ ಮತ್ತು ಜಾವೊ ಮ್ಯೂಟಿನೊ ಮುಂತಾದ ಆಟಗಾರರು ಪೋರ್ಚುಗಲ್ ತಂಡದ ಪರ ಮಿಂಚಿನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಸೆಸ್ ಫ್ಯಾಬ್ರೆಗಸ್, ಕ್ವಾರ್ಟರ್ ಫೈನಲ್ ಪಂದ್ಯದ ಹೀರೊ ಕ್ಸಾವಿ ಅಲೊನ್ಸೊ ಹಾಗೂ ಗೋಲ್‌ಕೀಪರ್ ಇಕರ್ ಕ್ಯಾಸಿಲ್ಲಾಸ್ ಸ್ಪೇನ್ ತಂಡದ ಬಲ ಎನಿಸಿದ್ದಾರೆ. ರೊನಾಲ್ಡೊ ತಮ್ಮ ಕಾಲ್ಚಳಕದ ಮೂಲಕ ಸ್ಪೇನ್ ತಂಡದ ರಕ್ಷಣಾ ವಿಭಾಗದಲ್ಲಿ ಬಿರುಕನ್ನು ಉಂಟುಮಾಡಬಹುದು. ಆದರೆ ಗೋಲು ಕಂಬಗಳ ನಡುವೆ ತಡೆಗೋಡೆಯಾಗಿ ನಿಲ್ಲುವ ಕ್ಯಾಸಿಲ್ಲಾಸ್ ಅವರನ್ನು ತಪ್ಪಿಸುವುದು ಅಷ್ಟು ಸುಲಭವಲ್ಲ.
ಪೋರ್ಚುಗಲ್ ಕೋಚ್ ಪೌಲೊ ಬೆಂಟೊ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮೊದಲ ಇಲೆವೆನ್‌ನಲ್ಲಿ ಬದಲಾವಣೆ ಉಂಟುಮಾಡಲಿದ್ದಾರೆ. ಸ್ಟೈಕರ್ ಹೆಲ್ಡರ್ ಪಾಸ್ಟಿಗಾ ಗಾಯಗೊಂಡಿರುವುದು ಇದಕ್ಕೆ ಕಾರಣ. ಅವರ ಬದಲು ಹ್ಯೂಗೊ ಅಲ್ಮೇಡಾ ಅಥವಾ ನೆಲ್ಸನ್ ಒಲಿವಿಯೆರಾ ಕಣಕ್ಕಿಳಿಯುವ ಸಾಧ್ಯತೆಯಿದೆ.
`ಸ್ಪೇನ್ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಆದ್ದರಿಂದ ಕೇವಲ ರೊನಾಲ್ಡೊ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು ಸರಿಯಲ್ಲ. ಎಲ್ಲ ಆಟಗಾರರ ಮೇಲೆ ನಿಯಂತ್ರಣ ಸಾಧಿಸುವುದು ನಮ್ಮ ಗುರಿ~ ಎಂದು ಸ್ಪೇನ್ ತಂಡದ ಕ್ಸಾವಿ ಹೆರ್ನಾಂಡೆಸ್ ನುಡಿದಿದ್ದಾರೆ.
ಇತಿಹಾಸವನ್ನು ನೋಡಿದರೆ ಸ್ಪೇನ್ ತಂಡ ಪೋರ್ಚುಗಲ್ ವಿರುದ್ಧ ಪ್ರಭುತ್ವ ಸಾಧಿಸಿರುವುದು ಕಂಡುಬರುತ್ತದೆ. ಇವೆರಡು ತಂಡಗಳು ಒಟ್ಟು 34 ಸಲ ಎದುರಾಗಿದ್ದು, ಸ್ಪೇನ್ 16ರಲ್ಲಿ ಗೆಲುವು ಪಡೆದಿದೆ. ಪೋರ್ಚುಗಲ್ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಯಶ ಕಂಡಿದೆ. 2010ರ ನವೆಂಬರ್‌ನಲ್ಲಿ ಲಿಸ್ಬನ್‌ನಲ್ಲಿ ಇವೆರಡು ತಂಡಗಳು ಕೊನೆಯ ಸಲ ಎದುರಾಗಿದ್ದಾಗ ಪೋರ್ಚುಗಲ್ 4-0ರಲ್ಲಿ ಗೆಲುವು ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.