ADVERTISEMENT

ಯೂರೊ ಫುಟ್‌ಬಾಲ್: ಸ್ವೀಡನ್ ತಂಡದ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ಕೀವ್ (ರಾಯಿಟರ್ಸ್): ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ಮರುಹೋರಾಟ ನಡೆಸಿದ ಇಂಗ್ಲೆಂಡ್ ಯೂರೊ -2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿ ಕೊಂಡಿತು.

ಕೀವ್‌ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 3-2 ಗೋಲುಗಳಿಂದ ಸ್ವೀಡನ್ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಸ್ವೀಡನ್ ನಾಕೌಟ್ ಹಂತ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು.

1-2 ರಲ್ಲಿ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಥಿಯೊ ವಾಲ್ಕಾಟ್ ತೋರಿದ ಅದ್ಭುತ ಪ್ರದರ್ಶನದ ಬಲದಿಂದ ರೋಚಕ ಜಯ ತನ್ನದಾಗಿಸಿಕೊಂಡಿತು. ಇದೀಗ `ಡಿ~ ಗುಂಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಲಾ ನಾಲ್ಕು ಪಾಯಿಂಟ್‌ಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿವೆ. ಉಕ್ರೇನ್ ಮೂರು ಪಾಯಿಂಟ್ ಹೊಂದಿದೆ. ಸ್ವೀಡನ್ ಪಾಯಿಂಟ್‌ಗಳ ಖಾತೆ ತೆರೆಯಲು ವಿಫಲವಾಗಿದೆ.

ಪಂದ್ಯದ ಮೊದಲ ಕೆಲವು ನಿಮಿಷಗಳ ಕಾಲ ಉಭಯ ತಂಡಗಳು ಮೇಲುಗೈ ಸಾಧಿಸಲು ತಕ್ಕಮಟ್ಟಿನ ಪ್ರಯತ್ನ ನಡೆಸಿದವು.

ತುರುಸಿನ ಪೈಪೋಟಿ ಕಂಡುಬಂದ ಪಂದ್ಯದ 23ನೇ ನಿಮಿಷದಲ್ಲಿ ಆ್ಯಂಡಿ ಕ್ಯಾರೊಲ್ ಇಂಗ್ಲೆಂಡ್‌ಗೆ ಮುನ್ನಡೆ ತಂದಿತ್ತರು. ಆದರೆ 49ನೇ ನಿಮಿಷದಲ್ಲಿ ಗ್ಲೆನ್ ಜಾನ್ಸನ್ ಅವರ `ಉಡುಗೋರೆ~ ಗೋಲಿನ ನೆರವಿನಿಂದ ಸ್ವೀಡನ್ ಸಮಬಲ ಸಾಧಿಸಿತು. 10 ನಿಮಿಷಗಳ ಬಳಿಕ ಒಲಾಫ್ ಮೆಲ್ಬರ್ಗ್ ಚೆಂಡನ್ನು ಗುರಿ ಸೇರಿಸಿ ಸ್ವೀಡನ್‌ಗೆ 2-1 ಮುನ್ನಡೆ ತಂದಿತ್ತರು.

ಹಿನ್ನಡೆ ಅನುಭವಿಸಿದರೂ ಇಂಗ್ಲೆಂಡ್ ಮರುಹೋರಾಟ ನಡೆಸಿತು. ಥಿಯೊ ವಾಲ್ಕಾಟ್ 64ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು 2-2 ರ ಸಮಸ್ಥಿತಿಗೆ ತಂದರು. ಡ್ಯಾನಿ ವೆಲ್‌ಬೆಕ್ 78ನೇ ನಿಮಿಷದಲ್ಲಿ ಆಕರ್ಷಕ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿ ಇಂಗ್ಲೆಂಡ್‌ಗೆ ಗೆಲುವು ತಂದಿತ್ತರು.

ಮಂಗಳವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಉಕ್ರೇನ್ ವಿರುದ್ಧ ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಲಿದೆ.
`ಗೆಲುವಿನ ಗೋಲು ದಾಖಲಿಸಲು ಸಾಧ್ಯವಾದದ್ದು ಸಂತಸ ನೀಡಿದೆ. ತಂಡಕ್ಕೆ ಪೂರ್ಣ ಮೂರು ಪಾಯಿಂಟ್ ಲಭಿಸಿದ್ದು ಅದಕ್ಕಿಂತಲೂ ಹೆಚ್ಚಿನ ಸಂಭ್ರಮ ಉಂಟುಮಾಡಿದೆ~ ಎಂದು ವೆಲ್‌ಬೆಕ್ ಪ್ರತಿಕ್ರಿಯಿಸಿದ್ದಾರೆ.

`ಈ ಪ್ರಮುಖ ಕ್ರೀಡಾಂಗಣದಲ್ಲಿ ನಾನಾಡಿದ ಮೊದಲ ಪಂದ್ಯ ಇದಾಗಿದೆ. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ಭವಿಷ್ಯದಲ್ಲಿ ಇನ್ನಷ್ಟು ಅವಕಾಶಗಳು ಲಭಿಸುವ ವಿಶ್ವಾಸ ನನ್ನದು~ ಎಂದು ವಾಲ್ಕಾಟ್ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.