ADVERTISEMENT

ರಣಜಿ ಕ್ರಿಕೆಟ್‌: ಜಯದ ಹೆಬ್ಬಾಗಿಲಲ್ಲಿ ಕರ್ನಾಟಕ

ಇನಿಂಗ್ಸ್‌ ಸೋಲು ತಪ್ಪಿಸಲು ಅಸ್ಸಾಂ ತಂಡಕ್ಕೆ 155 ರನ್‌ ಅಗತ್ಯ

ಮಹಮ್ಮದ್ ನೂಮಾನ್
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಕರ್ನಾಟಕದ ಕೆ.ಗೌತಮ್‌ ಹಾಗೂ ಸಹ ಆಟಗಾರರು ಅಸ್ಸಾಂ ತಂಡದ ಸ್ವರೂಪಂ ಅವರ ವಿರುದ್ಧ ಅಂಪೈರ್‌ಗೆ ಎಲ್‌ಬಿಡಬ್ಲ್ಯು ಮನವಿ ಸಲ್ಲಿಸಿದ ಕ್ಷಣ ಪ್ರಜಾವಾಣಿ ಚಿತ್ರ/ ಇರ್ಷಾದ್‌ ಮಹಮ್ಮದ್‌
ಕರ್ನಾಟಕದ ಕೆ.ಗೌತಮ್‌ ಹಾಗೂ ಸಹ ಆಟಗಾರರು ಅಸ್ಸಾಂ ತಂಡದ ಸ್ವರೂಪಂ ಅವರ ವಿರುದ್ಧ ಅಂಪೈರ್‌ಗೆ ಎಲ್‌ಬಿಡಬ್ಲ್ಯು ಮನವಿ ಸಲ್ಲಿಸಿದ ಕ್ಷಣ ಪ್ರಜಾವಾಣಿ ಚಿತ್ರ/ ಇರ್ಷಾದ್‌ ಮಹಮ್ಮದ್‌   

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಆಲ್‌ರೌಂಡ್‌ ಆಟ ಮುಂದುವರಿಸಿದ ಕರ್ನಾಟಕ ತಂಡದವರು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಇನಿಂಗ್ಸ್‌ ಗೆಲುವಿಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 324 ರನ್‌ಗಳ ಭಾರಿ ಮುನ್ನಡೆ ಪಡೆದ ಆರ್‌.ವಿನಯ್‌ ಕುಮಾರ್‌ ಬಳಗ ಮೂರನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಅಸ್ಸಾಂ ತಂಡವನ್ನು ಆರು ವಿಕೆಟ್‌ಗಳಿಗೆ 169 ರನ್‌ಗಳಿಗೆ ನಿಯಂತ್ರಿಸಿದೆ. ಪ್ರವಾಸಿ ತಂಡಕ್ಕೆ ಇನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 155 ರನ್‌ ಗಳಿಸಬೇಕು. ಕೈಯಲ್ಲಿ ಕೇವಲ ನಾಲ್ಕು ವಿಕೆಟ್‌ಗಳು ಉಳಿದುಕೊಂಡಿವೆ.

ಮೂರನೇ ದಿನದಾಟದಲ್ಲೇ ಗೆಲುವಿನ ಸಂಭ್ರಮ ಆಚರಿಸುವ ಕರ್ನಾಟಕದ ಆಸೆಗೆ ಅಸ್ಸಾಂ ತಂಡದ ನಾಯಕ ಗೋಕುಲ್ ಶರ್ಮ (ಅಜೇಯ 62, 111 ಎಸೆತ, 6 ಬೌಂ) ಅವರ ಆಟ ಮತ್ತು ಮಂದ ಬೆಳಕು ಅಡ್ಡಿಯಾಯಿತು. ಮಂದಬೆಳಕಿನ ಕಾರಣ 18 ಓವರ್‌ಗಳು ಇರುವಂತೆಯೇ ದಿನದಾಟಕ್ಕೆ ತೆರೆ ಎಳೆಯಲಾಯಿತು. ಕೊನೆಯ ದಿನವಾದ ಮಂಗಳವಾರ ಬೆಳಗ್ಗಿನ ಅವಧಿಯಲ್ಲೇ ಗೆಲುವಿನ ವ್ಯವಹಾರ ಪೂರೈಸುವುದು ಕರ್ನಾಟಕದ ಉದ್ದೇಶ.

ADVERTISEMENT

ಕೆ.ಗೌತಮ್‌ (39ಕ್ಕೆ 3) ಮತ್ತು ಅಭಿಮನ್ಯು ಮಿಥುನ್‌ (29ಕ್ಕೆ 2) ಎರಡನೇ ಇನಿಂಗ್ಸ್‌ನಲ್ಲಿ ಅಸ್ಸಾಂಗೆ ಪೆಟ್ಟು ನೀಡಿದರು. ಆಕರ್ಷಕ ಶತಕದ ಜತೆಗೆ ಪಂದ್ಯದಲ್ಲಿ ಈಗಾಗಲೇ ಒಟ್ಟು ಏಳು ವಿಕೆಟ್‌ ಪಡೆದಿರುವ ಗೌತಮ್‌ ಎದುರಾಳಿ ತಂಡದ ನಿದ್ದೆಗೆಡಿಸಿದ್ದಾರೆ.

ಮಿಥುನ್‌ ಮಿಂಚು: ಭಾರಿ ಹಿನ್ನಡೆ ಅನುಭವಿಸಿದ್ದ ಅಸ್ಸಾಂ ಒತ್ತಡದಲ್ಲೇ ಎರಡನೇ ಇನಿಂಗ್ಸ್‌ ಆರಂಭಿಸಿತು. ಆತಿಥೇಯರಿಗೆ ಬೇಗನೇ ಯಶಸ್ಸು ಲಭಿಸಿತು. ಏಳನೇ ಓವರ್‌ನಲ್ಲಿ ಪಲ್ಲವ್‌ ಕುಮಾರ್‌ ದಾಸ್‌ (5) ಅವರನ್ನು ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ ನೆರವಿನಿಂದ ಔಟ್‌ ಮಾಡಿದ ಮಿಥುನ್‌ ವಿಕೆಟ್‌ ಬೇಟೆಗೆ ನಾಂದಿ ಹಾಡಿದರು. ಮುಂದಿನ ಓವರ್‌ನಲ್ಲಿ ಪ್ರೀತಂ ದೇವನಾಥ್‌ (2) ಅವರನ್ನೂ ಪೆವಿಲಿಯನ್‌ಗಟ್ಟಿದರು. 20 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡ ಅಸ್ಸಾಂ ಸಂಕಷ್ಟಕ್ಕೆ ಸಿಲುಕಿತು.

ಗೌತಮ್‌ ‘ಕಮಾಲ್‌’: ಗ್ಲೇಡ್ಸ್‌ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಕಾರಣ ವಿನಯ್‌ ಅವರು 10ನೇ ಓವರ್‌ನಿಂದಲೇ ಗೌತಮ್‌ ಮೂಲಕ ಸ್ಪಿನ್‌ ಆಕ್ರಮಣ ಆರಂಭಿಸಿದರು. ರಿಷವ್‌ ದಾಸ್‌ ಮತ್ತು ಶಿವಶಂಕರ್‌ ರಾಯ್‌ ಎಚ್ಚರಿಕೆಯಿಂದ ಆಡಿ ಲಂಚ್‌ವರೆಗೆ ವಿಕೆಟ್‌ ಬೀಳದಂತೆ ನೋಡಿಕೊಂಡರು. ಭೋಜನ ವಿರಾ ಮದ ಬಳಿಕದ ಎಂಟನೇ ಓವರ್‌ನಲ್ಲಿ ವಿನಯ್‌ ಅವರು ರಿಷಬ್‌ ವಿಕೆಟ್‌ ಪಡೆದರು. ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಪರದಾಟ ನಡೆಸುತ್ತಲೇ ಇದ್ದ ರಿಷಬ್‌ 60 ಎಸೆತಗಳಿಂದ 21 ರನ್‌ ಗಳಿಸಿದರು.

ಶಿವಶಂಕರ್‌ ರಾಯ್‌ (44, 102 ಎಸೆತ, 8 ಬೌಂ) ಮತ್ತು ಗೋಕುಲ್‌ ಶರ್ಮ ನಾಲ್ಕನೇ ವಿಕೆಟ್‌ಗೆ 97 ಎಸೆತಗಳಲ್ಲಿ 56 ರನ್‌ ಸೇರಿಸಿದರು. ಈ ಜತೆಯಾಟ ಮುರಿದ ಗೌತಮ್ ಕರ್ನಾಟಕಕ್ಕೆ ಮೇಲುಗೈ ತಂದಿತ್ತರು. ಎಂಟನೇ ಓವರ್‌ನಲ್ಲೇ ಯಶಸ್ಸು ದೊರೆತದ್ದು ಗೌತಮ್‌ ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು.ಮತ್ತೊಂದು ಸುಂದರ ಎಸೆತದಲ್ಲಿ ತರ್ಜಿಂದರ್‌ ಸಿಂಗ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಚಹಾ ವಿರಾಮದ ವೇಳೆಗೆ ಅಸ್ಸಾಂ 52 ಓವರ್‌ಗಳಲ್ಲಿ 5 ವಿಕೆಟ್‌ಗೆ 132 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿತ್ತು.
ಅಂತಿಮ ಅವಧಿಯಲ್ಲೂ ಗೌತಮ್‌ ಕೈಚಳಕ ಮುಂದುವರಿಯಿತು. ಸ್ವರೂಪಂ ಪುರಕಾಯಸ್ತ (14) ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದರು. ಕರ್ನಾಟಕ ಮೂರೇ ದಿನಗಳಲ್ಲಿ ಪಂದ್ಯಕ್ಕೆ ಅಂತ್ಯಹಾಡಲಿದೆ ಎಂದು ಭಾವಿಸಿದ್ದ ವೇಳೆ ಮಂದ ಬೆಳಕು ಅಡ್ಡಿಯಾಯಿತು.

ಶ್ರೇಯಸ್‌ ಅರ್ಧಶತಕ: ಆರು ವಿಕೆಟ್‌ಗಳಿಗೆ 427 ರನ್‌ಗಳಿಂದ ಬೆಳಿಗ್ಗೆ ಆಟ ಮುಂದುವರಿಸಿದ್ದ ಕರ್ನಾಟಕ 126.4 ಓವರ್‌ಗಳಲ್ಲಿ 7 ವಿಕೆಟ್‌ಗೆ 469 ರನ್‌ ಗಳಿಸಿ ಡಿಕ್ಲೇರ್ಡ್‌ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಕೆ.ಗೌತಮ್‌ (149) ಹಿಂದಿನ ದಿನದ ಮೊತ್ತಕ್ಕೆ ಎರಡು ರನ್‌ ಸೇರಿಸಿ ಅರೂಪ್‌ ದಾಸ್‌ಗೆ ರಿಟರ್ನ್‌ ಕ್ಯಾಚ್‌ ನೀಡಿ ಔಟಾದರು.

ಶ್ರೇಯಸ್‌ ಗೋಪಾಲ್‌ (50, 93 ಎಸೆತ, 3 ಬೌಂ) ಅರ್ಧಶತಕ ಪೂರೈಸುತ್ತಿದ್ದಂತೆಯೇ ಕರ್ನಾಟಕ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ವಿನಯ್‌ ಕುಮಾರ್‌ 29 ಎಸೆತಗಳಲ್ಲಿ ಅಜೇಯ 27 ರನ್‌ ಗಳಿಸಿದರು.

ಮಿಥುನ್‌ 200 ವಿಕೆಟ್‌ ಸಾಧನೆ: ಅಭಿಮನ್ಯು ಮಿಥುನ್‌ ಅವರು ರಣಜಿ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಿದರು. ಅಸ್ಸಾಂ ತಂಡದ ಎರಡನೇ ಇನಿಂಗ್ಸ್‌ನಲ್ಲಿ ಪ್ರೀತಂ ದೇವನಾಥ್‌ ಅವರ ವಿಕೆಟ್‌ ಪಡೆದು ಈ ಗೌರವ ತಮ್ಮದಾಗಿಸಿಕೊಂಡರು. ಅವರು ಇದುವರೆಗೆ 56 ಪಂದ್ಯಗಳನ್ನು ಆಡಿದ್ದಾರೆ. ಈ ಸಾಧನೆ ಮಾಡಿದ ಕರ್ನಾಟಕದ ಏಳನೇ ಬೌಲರ್‌ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.