ADVERTISEMENT

ರಾಜಸ್ಥಾನ್‌ ರಾಯಲ್ಸ್‌ಗೆ ಗೆಲುವು

ಇಂಡಿಯನ್‌ ಪ್ರೀಮಿಯರ್‌ ಲೀಗ್‌: ಜೋಸ್‌ ಬಟ್ಲರ್‌ ಅಜೇಯ ಅರ್ಧಶತಕ

ಪಿಟಿಐ
Published 11 ಮೇ 2018, 19:44 IST
Last Updated 11 ಮೇ 2018, 19:44 IST
ರಾಜಸ್ಥಾನ್‌ ರಾಯಲ್ಸ್ ತಂಡದ ಪರ ಅರ್ಧಶತಕ ಗಳಿಸಿದ ಜೋಸ್ ಬಟ್ಲರ್ ಅವರ ಬ್ಯಾಟಿಂಗ್‌ ವೈಖರಿ ಪಿಟಿಐ ಚಿತ್ರ
ರಾಜಸ್ಥಾನ್‌ ರಾಯಲ್ಸ್ ತಂಡದ ಪರ ಅರ್ಧಶತಕ ಗಳಿಸಿದ ಜೋಸ್ ಬಟ್ಲರ್ ಅವರ ಬ್ಯಾಟಿಂಗ್‌ ವೈಖರಿ ಪಿಟಿಐ ಚಿತ್ರ   

ಜೈಪುರ: ಜೋಸ್ ಬಟ್ಲರ್ (95; 60ಎ, 2 ಸಿ, 11 ಬೌಂ) ಅವರ ಅಮೋಘ ಆಟದ ಬಲದಿಂದ ರಾಜಸ್ಥಾನ್‌ ರಾಯಲ್ಸ್ ತಂಡ ಐಪಿಎಲ್‌ನ ಶುಕ್ರವಾರದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು.

177 ರನ್‌ಗಳ ಜಯದ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್‌ ಉತ್ತಮ ಆರಂಭ ಒದಗಿಸಿದರು. ಸ್ಟೋಕ್ಸ್ ಔಟಾದ ಬೆನ್ನಲ್ಲೇ ನಾಯಕ ಅಜಿಂಕ್ಯ ರಹಾನೆ ಕೂಡ ವಾಪಸಾದರು.

ಆದರೆ ಬಟ್ಲರ್ ಅವರ ಜೊತೆಗೂಡಿದ ಸಂಜು ಸ್ಯಾಮ್ಸನ್‌ ತಂಡವನ್ನು ಮೂರಂಕಿ ಸನಿಹ ತಲುಪಿಸಿದರು. ಸಂಜು ಔಟಾದ ನಂತರ ಸ್ಟುವರ್ಟ್ ಬಿನ್ನಿ ಮತ್ತು ಕೆ.ಗೌತಮ್ ಜೊತೆಗೂಡಿ ಬಟ್ಲರ್‌ ಅವರು ತಂಡಕ್ಕೆ ಜಯ ಗಳಿಸಿಕೊಟ್ಟರು.

ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಸುರೇಶ್ ರೈನಾ (52; 35ಎ, 6ಬೌಂ, 1ಸಿ) ಮತ್ತು ಮಹೇಂದ್ರಸಿಂಗ್ ದೋನಿ (ಔಟಾಗದೆ 33; 23ಎ, 1ಬೌಂ, 1ಸಿ) ಅವರ ಆಟದ ಬಲದಿಂದ ಹೋರಾಟದ ಮೊತ್ತ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 176 ರನ್‌ಗಳನ್ನು ಗಳಿಸಿತು.

ಸಿಎಸ್‌ಕೆ ತಂಡಕ್ಕೆ ರಾಯಲ್ಸ್‌ ತಂಡದ ‘ಯಾರ್ಕರ್‌ ಪರಿಣತ’ ಬೌಲರ್ ಜೋಫ್ರಾ ಆರ್ಚರ್ ಆರಂಭದಲ್ಲಿಯೇ ಆಘಾತ ನೀಡಿದರು. ಮೂರನೇ ಓವರ್‌ನಲ್ಲಿ ಅಂಬಟಿ ರಾಯುಡು (12; 9ಎ,2ಬೌಂ) ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಆರ್ಚರ್ ಕೇಕೆ ಹಾಕಿದರು. ಅವರ ಖುಷಿ ಹೆಚ್ಚು ಹೊತ್ತು ಇರಲಿಲ್ಲ.

ಇನ್ನೊಂದು ಬದಿಯ ಕ್ರೀಸ್‌ನಲ್ಲಿದ್ದ ಶೇನ್ ವಾಟ್ಸನ್  ಅವರೊಂದಿಗೆ ಸೇರಿದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಜವಾಬ್ದಾರಿಯುತ ಆಟವಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 86 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು 11ನೇ ಓವರ್‌ನಲ್ಲಿ ನೂರರ ಗಡಿ ಮುಟ್ಟಿತು.

ಆದರೆ 12ನೇ ಓವರ್‌ನಲ್ಲಿ ಮತ್ತೆ ದಾಳಿ ಮಾಡಿದ ಆರ್ಚರ್‌ ಅವರು ಶೇನ್ (39; 31ಎ,2ಬೌಂ,2ಸಿ) ವಿಕೆಟ್ ಕಬಳಿಸಿದರು.

ನಂತರ ಬಂದ ದೋನಿ ಅವರು ರೈನಾ ಜೊತೆಗೂಡಿ ರನ್‌ ಗಳಿಕೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಆದರೆ, ಸ್ಪಿನ್ನರ್ ಈಶ್ ಸೋಧಿ ಹಾಕಿದ 13ನೇ ಓವರ್‌ನಲ್ಲಿ ರೈನಾ ಅವರು ಸ್ಟುವರ್ಟ್‌ ಬಿನ್ನಿಗೆ ಕ್ಯಾಚಿತ್ತು ನಿರ್ಗಮಿಸಿದರು.

ದೋನಿ ಜೊತೆಗೂಡಿದ ಸ್ಯಾಮ್ ಬಿಲ್ಲಿಂಗ್ಸ್‌ (27; 22ಎ,3ಬೌಂ) ಅವರು ತಂಡದ ಮೊತ್ತ ಹೆಚ್ಚಲು ಕಾರಣರಾದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 55 ರನ್‌ಗಳನ್ನು ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 176 (ಶೇನ್ ವಾಟ್ಸನ್ 39, ಅಂಬಟಿ ರಾಯುಡು 12, ಸುರೇಶ್ ರೈನಾ 52, ಮಹೇಂದ್ರಸಿಂಗ್ ದೋನಿ ಔಟಾಗದೆ 33, ಸ್ಯಾಮ್ ಬಿಲ್ಲಿಂಗ್ಸ್‌ 27, ಜೋಫ್ರಾ ಆರ್ಚರ್ 42ಕ್ಕೆ2, ಈಶ್ ಸೋಧಿ 29ಕ್ಕೆ1)

ರಾಜಸ್ಥಾನ್ ರಾಯಲ್ಸ್‌: 19.5 ಓವರ್‌ಗಳಲ್ಲಿ 6ಕ್ಕೆ 177 (ಜೋಸ್ ಬಟ್ಲರ್‌ ಅಜೇಯ 95, ಬೆನ್ ಸ್ಟೋಕ್ಸ್‌ 11, ಸಂಜು ಸ್ಯಾಮ್ಸನ್‌ 21, ಸ್ಟುವರ್ಟ್‌ ಬಿನ್ನಿ 22, ಕೆ.ಗೌತಮ್‌ 13).

ಫಲಿತಾಂಶ: ರಾಜಸ್ಥಾನ್‌ ರಾಯಲ್ಸ್‌ಗೆ 4 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಜೋಸ್ ಬಟ್ಲರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.