ADVERTISEMENT

ರಾಜ್ಯ ರ‌್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್:ಶಬ್ಬೀರ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಬೆಂಗಳೂರು: ತಮಿಳುನಾಡಿನ ಶಬ್ಬೀರ್ ಧನ್ಕೋಟ್ ಅವರು ಇಲ್ಲಿ ನಡೆದ ಕರ್ನಾಟಕ ರಾಜ್ಯ ಟೆನ್‌ಪಿಪ್ ಬೌಲಿಂಗ್ ಸಂಸ್ಥೆ ಆಶ್ರಯದ ರಾಜ್ಯ ರ‌್ಯಾಂಕಿಂಗ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಸ್ಟಾರ್‌ಸಿಟಿ ಬೌಲಿಂಗ್ ಸೆಂಟರ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಶಬ್ಬೀರ್ ಟೈಬ್ರೇಕರ್‌ನಲ್ಲಿ ಮೂರು ಪಿನ್‌ಗಳಿಂದ ಕರ್ನಾಟಕದ ಆಕಾಶ್ ಅಶೋಕ್ ವಿರುದ್ಧ ರೋಚಕ ಗೆಲುವು ಪಡೆದರು. ಎರಡು ಗೇಮ್‌ಗಳ ಫೈನಲ್ ಪಂದ್ಯದ ಕೊನೆಯಲ್ಲಿ ಇಬ್ಬರೂ 402- 402 ಪಾಯಿಂಟ್‌ಗಳಿಂದ ಸಮಬಲ ಸಾಧಿಸಿದ್ದರು.

ಇದರಿಂದ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್ ಮೊರೆಹೋಗಲಾಯಿತು. ಇಬ್ಬರಿಗೂ ತಲಾ ಒಂದು ಬಾರಿ ಚೆಂಡನ್ನು ಉರುಳಿಸಲು ಅವಕಾಶ ನೀಡಲಾಯಿತು. ಶಬ್ಬೀರ್ 10 ಪಿನ್‌ಗಳನ್ನು ಬೀಳಿಸುವಲ್ಲಿ ಯಶಸ್ವಿಯಾದರೆ, ಆಕಾಶ್ ಏಳು ಪಿನ್‌ಗಳನ್ನು ಮಾತ್ರ ಬೀಳಿಸಿದರು.

ತಮಿಳುನಾಡಿನ ಆಟಗಾರ ಲೀಗ್ ಹಂತದಲ್ಲಿ 219 ಪಾಯಿಂಟ್ ಕಲೆಹಾಕಿ ನೇರವಾಗಿ ಫೈನಲ್‌ಗೆ ಪ್ರವೇಶಿಸಿದ್ದರು. ಆಕಾಶ್ ನಾಕೌಟ್ ಹಂತದಲ್ಲಿ 479-411 ರಲ್ಲಿ ತಮಿಳುನಾಡಿನ ಸೆಂಥಿಲ್ ವಿರುದ್ಧ ಗೆಲುವು ಪಡೆದಿದ್ದರು.
ಒಂದು ಗೇಮ್‌ನಲ್ಲಿ ಅತಿಹೆಚ್ಚು ಪಾಯಿಂಟ್ (279) ಹಾಗೂ ಅತ್ಯಧಿಕ ಬಾರಿ 200 ಕ್ಕೂ ಹೆಚ್ಚು (8 ಸಲ) ಪಾಯಿಂಟ್ ಕಲೆಹಾಕಿದ ಶಬ್ಬೀರ್ ವಿಶೇಷ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.