ADVERTISEMENT

ರಾಯಲ್ಸ್‌ಗೆ ಮಣಿದ ಕಿಂಗ್ಸ್‌ ಇಲೆವನ್‌

ಪಿಟಿಐ
Published 8 ಮೇ 2018, 20:00 IST
Last Updated 8 ಮೇ 2018, 20:00 IST
ಅರ್ಧಶತಕ ಗಳಿಸಿದ ಕೆ.ಎಲ್‌.ರಾಹುಲ್ ಅವರ ಬ್ಯಾಟಿಂಗ್ ವೈಖರಿ – ಎಎಫ್‌ಪಿ ಚಿತ್ರ
ಅರ್ಧಶತಕ ಗಳಿಸಿದ ಕೆ.ಎಲ್‌.ರಾಹುಲ್ ಅವರ ಬ್ಯಾಟಿಂಗ್ ವೈಖರಿ – ಎಎಫ್‌ಪಿ ಚಿತ್ರ   

ಜೈಪುರ: ಆರಂಭಿಕ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್‌.ರಾಹುಲ್‌ (95; 70 ಎಸೆತ, 2 ಸಿ, 11 ಬೌಂ) ಅವರ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ. ಮಂಗಳವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ 15 ರನ್‌ಗಳಿಂದ ಮಣಿಯಿತು.

159 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಯಲ್ಸ್‌ ಪರ ರಾಹುಲ್ ಒಬ್ಬರೇ ಕೊನೆಯವರೆಗೆ ಕ್ರೀಸ್‌ನಲ್ಲಿದ್ದು ಆಡಿದರು. ಆದರೆ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಅವರಿಗೆಬೆಂಬಲ ಸಿಗಲಿಲ್ಲ. ಮಾರ್ಕಸ್ ಸ್ಟೋಯಿನಿಸ್ ಬಿಟ್ಟರೆ ಉಳಿದೆಲ್ಲರೂ ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು.

ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್ಸ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ (82; 58 ಎ, 1 ಸಿ, 9 ಬೌಂ) ಮಿಂಚಿದರು. ನಾಲ್ಕು ವಿಕೆಟ್ ಉರುಳಿಸಿದ ಆ್ಯಂಡ್ರ್ಯೂ ಟೈ ದಾಳಿಗೆ ಇತರ ಬ್ಯಾಟ್ಸ್‌ಮನ್‌ಗಳು ನಲುಗಿದರು.

ADVERTISEMENT

ಟಾಸ್‌ ಸೋತು ಬೌಲಿಂಗ್ ಮಾಡಿದ ಕಿಂಗ್ಸ್‌, ನಾಲ್ಕನೇ ಓವರ್‌ನಲ್ಲಿ ರಾಯಲ್ಸ್‌ಗೆ ಆಘಾತ ನೀಡಿತು. ನಾಯಕ ಅಜಿಂಕ್ಯ ರಹಾನೆ, ವೇಗಿ ಆ್ಯಂಡ್ರ್ಯೂ ಟೈಗೆ ವಿಕೆಟ್ ಒಪ್ಪಿಸಿದರು. ಭರವಸೆಯ ಬ್ಯಾಟ್ಸ್‌ಮನ್‌, ಕರ್ನಾಟಕದ ಕೆ.ಗೌತಮ್ ಕೂಡ ಬೇಗನೇ ವಾಪಸಾದರು.

ಆದರೆ ಇನ್ನೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್‌ ಆಗಲೇ ತಂಡದ ಮೊತ್ತ‌ 64ಕ್ಕೆ ಏರುವಂತೆ ಮಾಡಿದರು. ಅವರೊಂದಿಗೆ ಸಂಜು ಸ್ಯಾಮ್ಸನ್‌ ಮೂರನೇ ವಿಕೆಟ್‌ಗೆ 53 ರನ್ ಸೇರಿಸಿದರು. 17ನೇ ಓವರ್‌ನಲ್ಲಿ ಬಟ್ಲರ್ ಕೂಡ ಔಟಾದರು. ನಂತರ ಆ್ಯಂಡ್ರ್ಯೂ ಟೈ ಮಿಂಚಿದರು. ಕೊನೆಯ ಮೂವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟಲಾಗದೆ ಔಟಾದರು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್ ರಾಯಲ್ಸ್‌: 20 ಓವರ್‌ಗಳಲ್ಲಿ 8ಕ್ಕೆ 158 (ಅಜಿಂಕ್ಯ ರಹಾನೆ 9, ಜೋಸ್ ಬಟ್ಲರ್‌ 82, ಕೆ.ಗೌತಮ್‌ 8, ಸಂಜು ಸ್ಯಾಮ್ಸನ್ 22, ಬೆನ್ ಸ್ಟೋಕ್ಸ್ 14, ಸ್ಟುವರ್ಟ್‌ ಬಿನ್ನಿ 11, ಲಾಮ್ರರ್‌ ಔಟಾಗದೆ 9, ಜೊಫ್ರಾ ಆರ್ಚರ್‌ 0, ಜಯದೇವ ಉನದ್ಕತ್‌ 0; ಮಾರ್ಕಸ್‌ ಸ್ಟೋಯಿನಿಸ್‌ 15ಕ್ಕೆ1, ಆ್ಯಂಡ್ರ್ಯೂ ಟೈ 34ಕ್ಕೆ4, ಮುಜೀಬ್ ಉರ್ ರಹಿಮಾನ್‌ 21ಕ್ಕೆ2); ಕಿಂಗ್ಸ್ ಇಲೆವನ್ ಪಂಜಾ‌ಬ್‌: 20 ಓವರ್‌ಗಳಲ್ಲಿ 7ಕ್ಕೆ 143
(ಕೆ.ಎಲ್‌.ರಾಹುಲ್‌ ಔಟಾಗದೆ 95, ಕ್ರಿಸ್‌ ಗೇಲ್‌ 1, ಕರುಣ್ ನಾಯರ್‌ 3, ಎ.ಡಿ.ನಾಥ್ 9, ಮನೋಜ್‌ ತಿವಾರಿ 7, ಅಕ್ಷರ್ ಪಟೇಲ್‌ 9, ಮಾರ್ಕಸ್ ಸ್ಟೋಯಿನಿಸ್‌ 11; ಕೆ.ಗೌತಮ್‌ 12ಕ್ಕೆ2, ಜೊಫ್ರಾ ಆರ್ಚರ್‌ 32ಕ್ಕೆ1, ಬೆನ್ ಸ್ಟೋಕ್ಸ್‌ 13ಕ್ಕೆ1, ಇಶ್‌ ಸೋಧಿ 14ಕ್ಕೆ1).
ಫಲಿತಾಂಶ: ರಾಜಸ್ಥಾನ್ ರಾಯಲ್ಸ್‌ಗೆ 15 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.