ADVERTISEMENT

ರಾಯಲ್ಸ್‌ಗೆ ಹ್ಯಾಟ್ರಿಕ್‌ ಗೆಲುವಿನ ಗುರಿ

ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿ ಭರವಸೆಯಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್‌

ಪಿಟಿಐ
Published 17 ಏಪ್ರಿಲ್ 2018, 20:00 IST
Last Updated 17 ಏಪ್ರಿಲ್ 2018, 20:00 IST
ರಾಯಲ್ಸ್‌ಗೆ ಹ್ಯಾಟ್ರಿಕ್‌ ಗೆಲುವಿನ ಗುರಿ
ರಾಯಲ್ಸ್‌ಗೆ ಹ್ಯಾಟ್ರಿಕ್‌ ಗೆಲುವಿನ ಗುರಿ   

ಜೈಪುರ: ಬಲಿಷ್ಠ ತಂಡಗಳನ್ನು ಮಣಿಸಿ ಭರವಸೆಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಬುಧವಾರದ ಪಂದ್ಯದಲ್ಲಿ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ. ಇಲ್ಲಿ ರಾತ್ರಿ ನಡೆಯುವ ಪಂದ್ಯದಲ್ಲಿ ಈ ತಂಡ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋತಿದ್ದ ರಾಜಸ್ಥಾನ ರಾಯಲ್ಸ್ ನಂತರ ಡೆಲ್ಲಿ ಡೇರ್‌ ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಗೆಲುವಿನ ಲಯಕ್ಕೆ ಮರಳಿತ್ತು. ಡೇರ್‌ ಡೆವಿಲ್ಸ್ ಎದುರಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ಗೆದ್ದಿತ್ತು. ಆದರೆ ಸಮರ್ಥ ಆಟಗಾರರನ್ನು ಹೊಂದಿರುವ ಬೆಂಗಳೂರು ತಂಡದ ವಿರುದ್ಧ ರಾಯಲ್ಸ್‌ 19 ರನ್‌ಗಳ ಜಯ ದಾಖಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿತ್ತು.

ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ 45 ಎಸೆತಗಳಲ್ಲಿ 92 ರನ್ ಗಳಿಸಿದ್ದರು. ಇದೇ ರೀತಿಯಲ್ಲಿ ಸ್ಯಾಮ್ಸನ್‌ ಮತ್ತೊಮ್ಮೆ ಆಡುವ ನಿರೀಕ್ಷೆಯಲ್ಲಿದೆ ರಾಯಲ್ಸ್ ತಂಡ. ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮುಂತಾದವರ ವಿಕೆಟ್ ಕಬಳಿಸಲು ಸಾಧ್ಯವಾದದ್ದು ಬೌಲಿಂಗ್ ವಿಭಾಗದಲ್ಲೂ ವಿಶ್ವಾಸ ಮೂಡಿಸಿದೆ.

ADVERTISEMENT

ಕೆಕೆಆರ್‌ ತಂಡದಲ್ಲೂ ಭರವಸೆ: ತವರಿನಲ್ಲಿ ಒಂದು ಪಂದ್ಯವನ್ನೂ ಸೋಲದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಕೋಲ್ಕತ್ತ ನೈಟ್‌ ರೈಡರ್ಸ್‌ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಸೋಮವಾರ ರಾತ್ರಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಮಣಿಸಿದ ಕೆಕೆಆರ್‌ ಈಗ ಆತ್ಮವಿಶ್ವಾಸದಲ್ಲಿ ತೇಲುತ್ತಿದೆ.

ಆರಂಭಿಕ ಜೋಡಿ ಕ್ರಿಸ್‌ ಲಿನ್ ಮತ್ತು ಸುನಿಲ್ ನಾರಾಯಣ್‌ ಅವರು ಕೆಕೆಆರ್ ತಂಡದ ಬ್ಯಾಟಿಂಗ್ ಶಕ್ತಿ. ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್‌, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್‌ ಮುಂತಾದವರಿಗೆ ಎಂಥ ದಾಳಿಯನ್ನೂ ಮೆಟ್ಟಿ ನಿಲ್ಲುವ ಶಕ್ತಿ ಇದೆ.

11ನೇ ಆವೃತ್ತಿಯಲ್ಲಿ ಈ ವರೆಗೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಸುನಿಲ್ ನಾರಾಯಣ್‌ ಬೌಲಿಂಗ್‌ನಲ್ಲೂ ತಂಡದ ಭರವಸೆ ಉಳಿಸಿಕೊಂಡಿದ್ದಾರೆ. ಲೆಗ್ ಸ್ಪಿನ್ನರ್‌
ಪೀಯೂಷ್ ಚಾವ್ಲಾ ಮತ್ತು ಚೈನಾಮನ್ ಶೈಲಿಯ ಬೌಲರ್‌ ಕುಲದೀಪ್ ಯಾದವ್‌ ಅವರ ಮೇಲೆಯೂ ತಂಡಕ್ಕೆ ಭರವಸೆ ಇದೆ. ಶಿವಂ ಮಾವಿ ಮತ್ತು ಆ್ಯಂಡ್ರೆ ರಸೆಲ್‌ ವೇಗದ
ಬೌಲಿಂಗ್‌ ವಿಭಾಗದ ಚುಕ್ಕಾಣಿ ಹಿಡಿದಿದ್ದಾರೆ.

ಕಳೆದ ಪಂದ್ಯದ ವೇಳೆ ಎರಡೂವರೆ ತಾಸು ಮಳೆ ಕಾಡಿತ್ತು. ಈಗ ಇಲ್ಲಿ ಒಣಹವೆ ಇದ್ದು ಪೂರ್ಣಾವಧಿಯ ಪಂದ್ಯ ನಡೆಸಲು ಅನುಕೂಲಕರ ವಾತಾವರಣ ಇದೆ.

ಪಂದ್ಯ ಆರಂಭ: ರಾತ್ರಿ 8.00.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.