ADVERTISEMENT

ರಾಯಲ್ ಚಾಲೆಂಜರ್ಸ್‌ಗೆ ಸುಲಭ ಜಯ:ಮಿಂಚಿದ ಗೇಲ್, ದಿಲ್ಶಾನ್

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಪುಣೆ: ಆಲ್‌ರೌಂಡ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಲಭಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 35 ರನ್‌ಗಳಿಂದ ಪುಣೆ ವಾರಿಯರ್ಸ್ ತಂಡವನ್ನು ಮಣಿಸಿತು. 

ಕ್ರಿಸ್ ಗೇಲ್ ಎಂದಿನಂತೆ ಅಬ್ಬರಿಸಿದರೆ, ತಿಲರತ್ನೆ ದಿಲ್ಶಾನ್ ಅವರಿಗೆ ತಕ್ಕ ಸಾಥ್ ನೀಡಿದರು. ಆ ಬಳಿಕ ಬೌಲರ್‌ಗಳು ಬಿಗುವಾದ ದಾಳಿ ನಡೆಸಿದರು. ಸಂಘಟಿತ ಪ್ರಯತ್ನದಿಂದ ಲಭಿಸಿದ ಈ ಗೆಲುವು ಚಾಲೆಂಜರ್ಸ್ ತಂಡದ `ಪ್ಲೇ ಆಫ್~ ಪ್ರವೇಶದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಪುಣೆ ವಾರಿಯರ್ಸ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ವಿನಯ್ ಕುಮಾರ್ (32ಕ್ಕೆ 3), ಮುತ್ತಯ್ಯ ಮುರಳೀಧರನ್ (16ಕ್ಕೆ 2) ಮತ್ತು ಜಹೀರ್ ಖಾನ್ (21ಕ್ಕೆ 2) ಸಮರ್ಥ ಬೌಲಿಂಗ್ ಮುಂದೆ ವಾರಿಯರ್ಸ್ ಪರದಾಟ ನಡೆಸಿತು. ರಾಬಿನ್ ಉತ್ತಪ್ಪ (38, 23 ಎಸೆತ, 4 ಬೌಂ, 1 ಸಿಕ್ಸರ್), ಅನುಸ್ತಪ್ ಮಜುಮ್ದಾರ್ (31) ಹಾಗೂ ಸ್ಟೀವನ್ ಸ್ಮಿತ್ (ಅಜೇಯ 24) ಹೋರಾಟ ನಡೆಸಿದರೂ ವಾರಿಯರ್ಸ್‌ಗೆ ಸೋಲು ತಪ್ಪಿಸಲು ಆಗಲಿಲ್ಲ.

ಮೋನಿಷ್ ಮಿಶ್ರಾ ಹಾಗೂ ಮನೀಷ್ ಪಾಂಡೆ ಅವರನ್ನು ವೇಗಿ ಜಹೀರ್ ಖಾನ್ ತಮ್ಮ ಮೊದಲ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಕಳುಹಿಸಿ ವಾರಿಯರ್ಸ್‌ಗೆ ಆಘಾತ ನೀಡಿದರು. ಇದರಿಂದ ಚೇತರಿಸಿಕೊಳ್ಳಲು ಆತಿಥೇಯ ತಂಡ ವಿಫಲವಾಯಿತು. 

ಗೇಲ್, ದಿಲ್ಶಾನ್ ಮಿಂಚು: ಮಳೆಯ ಕಾರಣ ಪಂದ್ಯ ಆರಂಭವಾಗಿದ್ದೇ ತಡವಾಗಿ. ಟಾಸ್ ಗೆದ್ದ ವಾರಿಯರ್ಸ್ ತಂಡದ ಸ್ಟೀವನ್ ಸ್ಮಿತ್ ಚಾಲೆಂಜರ್ಸ್ ತಂಡವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಆದರೆ ಗೇಲ್ (57; 31 ಎ, 3 ಬೌ, 6 ಸಿ.) ಬ್ಯಾಟಿಂಗ್ ಚಂಡಮಾರುತವಾಗಿ ಅಪ್ಪಳಿಸಿದರು. 

ತಿಲಕರತ್ನೆ ದಿಲ್ಶಾನ್ ಜೊತೆ ಇನಿಂಗ್ಸ್ ಆರಂಭಿಸಿದ ಗೇಲ್ ಮೊದಲ ಎರಡು ಓವರ್‌ಗಳಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ. ಆದರೆ ಮೂರನೇ ಓವರ್‌ನಲ್ಲಿ ಎರಡು ಸಿಕ್ಸರ್ ಎತ್ತಿ ತಮ್ಮ ಬಿರುಸಿನ ಆಟಕ್ಕೆ ಮುನ್ನುಡಿ ಬರೆದರು. ಭುವನೇಶ್ವರ್ ಕುಮಾರ್ ಹಾಕಿದ ಒಂದು ಓವರ್‌ನಲ್ಲಿ ನಾಲ್ಕು ಸಿಕ್ಸರ್ ಎತ್ತಿದರು. 

ದಿಲ್ಶಾನ್ (53; 44 ಎ, 6 ಬೌ, 1 ಸಿ.) ಲೆಕ್ಕಾಚಾರದ ಆಟವಾಡಿದರು. ಗೇಲ್ ಅಬ್ಬರಿಸುತ್ತಿದ್ದಾಗ ತಣ್ಣಗಿದ್ದ ಅವರು ನಂತರ ತಮ್ಮ ಆಟ ಶುರುವಿಟ್ಟುಕೊಂಡರು. ಅವರ ಜೊತೆಗೂಡಿದ ಸೌರಭ್ ತಿವಾರಿ (ಔಟಾಗದೆ 36; 30 ಎ, 3 ಬೌ, 1 ಸಿ.) ತಂಡದ ರನ್‌ವೇಗ ಹೆಚ್ಚಿಸಲು ಪ್ರಯತ್ನಿಸಿದರು.

ಆದರೆ ಕೊನೆಯಲ್ಲಿ ಆರ್‌ಸಿಬಿ ರನ್‌ವೇಗಕ್ಕೆ ಕಡಿವಾಣ ಹಾಕುವಲ್ಲಿ ವಾರಿಯರ್ಸ್ ಬೌಲರ್‌ಗಳು ಯಶಸ್ವಿಯಾದರು. ಅದರಲ್ಲೂ ಆ್ಯಂಜೆಲೊ ಮ್ಯಾಥ್ಯೂಸ್ ತಮ್ಮ ಮೂರು ಓವರ್‌ಗಳಲ್ಲಿ ನೀಡಿದ್ದು ಕೇವಲ 14 ರನ್. ಗೇಲ್ ಔಟಾದಾಗ ಆರ್‌ಸಿಬಿ 8.3 ಓವರ್‌ಗಳಲ್ಲಿಯೇ 80 ರನ್ ಗಳಿಸಿತ್ತು. ನಂತರ ರನ್‌ಗತಿ ಕುಂಠಿತವಾಯಿತು.
 
ಗೇಲ್ ಕ್ರೀಸ್‌ನಲ್ಲಿದ್ದಾಗ ತಂಡದ ಸ್ಕೋರ್ 200ರ ಸನಿಹ ತಲುಪಬಹುದು ಎಂದು ಅಂದಾಜಿಸಲಾಗಿತ್ತು.
ಈ ಪಂದ್ಯದಲ್ಲಿ ಸೌರವ್ ಗಂಗೂಲಿ ಆಡಲಿಲ್ಲ. ಹಾಗಾಗಿ ಸ್ಟೀವನ್ ಸ್ಮಿತ್ ತಂಡ ಮುನ್ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.