ADVERTISEMENT

ರಾಷ್ಟ್ರೀಯ ಕ್ರೀಡಾಕೂಟ:ಹರ್ಡಲ್ಸ್‌ನಲ್ಲಿ ಕುಲ್‌ದೇವ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:15 IST
Last Updated 20 ಫೆಬ್ರುವರಿ 2011, 18:15 IST

ರಾಂಚಿ: ಪಂಜಾಬ್‌ನ ಕುಲ್‌ದೇವ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದ ಪುರುಷರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.ಬಿರ್ಸಾ ಮುಂಡಾ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕುಲ್‌ದೇವ್ ಸಿಂಗ್ 50.31 ಸೆಕೆಂಡುಗಳಲ್ಲಿ ತಮ್ಮ ಗುರಿ ತಲುಪಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೊದಲು ಪಿ. ಶಂಕರ್ (51.37 ಸೆ) ಹೆಸರಿನಲ್ಲಿ ಈ ದಾಖಲೆಯಿತ್ತು.

1500 ಮೀ ಹರ್ಡಲ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದ ಸರ್ವಿಸಸ್‌ನ ಸಾಜೇಶ್ ಜೋಸೆಫ್ (3:48:05ಸೆ) ಗುರಿ ಕ್ರಮಿಸಿ ಚಿನ್ನದ ಪದಕ ಪಡೆದರು. ಉತ್ತರಾಖಂಡದ ರವೀಂದರ್ ಎಸ್. ರೌತೆಲಾ (3:48:47ಸೆ) ಬೆಳ್ಳಿ ಪದಕ ಪಡೆದರೆ, ಸಂಜೇಶ್ ಜೋಸೆಫ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಹರಿ ಶಂಕರ್ ರಾಯ್‌ಗೆ ಚಿನ್ನ: ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಜಾರ್ಖಂಡ್‌ನ ಹರಿಶಂಕರ್ ರಾಯ್ (ಎತ್ತರ 2.13ಮೀ) ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪಂಜಾಬ್‌ನ ಅರ್ಪಿಂದರ್ ಸಿಂಗ್ (16.62ಮೀ) ಚಿನ್ನದ ಪದಕ ಪಡೆದರೆ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಾಜಸ್ತಾನದ ವಿಕಾಸ್ ಪೂನಿಯಾ (ದೂರ 53.47) ಚಿನ್ನದ ಪದಕ ಗಳಿಸಿದರು.

ಕೊಕ್ಕೊ ಸೆಮಿಫೈನಲ್‌ಗೆ ಕರ್ನಾಟಕ: ಕರ್ನಾಟಕದ ಪುರುಷ ತಂಡದವರು ರಾಷ್ಟ್ರೀಯ ಕ್ರೀಡಾಕೂಟದ ಮೂರನೇ ಗುಂಪಿನ ಕೊಕ್ಕೊ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಕರ್ನಾಟಕ 16-16ರಿಂದ ಆಂಧ್ರಪ್ರದೇಶದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದಕ್ಕೂ ಮುನ್ನ ನಡೆದ ಇನ್ನೊಂದು ಪಂದ್ಯದಲ್ಲಿ ಕರ್ನಾಟಕ 27-15ಪಾಯಿಂಟ್‌ಗಳಿಂದ ಹರಿಯಾಣವನ್ನು ಮಣಿಸಿತು.

ಬ್ಯಾಸ್ಕೆಟ್‌ಬಾಲ್: ಕರ್ನಾಟಕ ತಂಡಕ್ಕೆ ಮೊದಲ ಗೆಲುವು: ಕಳೆದ ಪಂದ್ಯದಲ್ಲಿ ಛತ್ತೀಸಗಡದ ಎದುರು ಸೋಲು ಅನುಭವಿಸಿದ್ದ ಕರ್ನಾಟಕದ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದವರು ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಚಾಕಚಕ್ಯತೆಯ ಆಟ ಪ್ರದರ್ಶಿಸಿ 68-47ರಲ್ಲಿ ಪಂಜಾಬ್ ತಂಡವನ್ನು ಮಣಿಸಿದರು.

ಬ್ಯಾಡ್ಮಿಂಟನ್: ಫೈನಲ್‌ಗೆ ಆದಿತ್ಯ ಪ್ರಕಾಶ್: ಕರ್ನಾಟಕದ ಆದಿತ್ಯ ಪ್ರಕಾಶ್ ಪುರುಷರ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯ ಸಿಂಗಲ್ಸ್‌ನಲ್ಲಿ 14-21, 21-13, 21-17ರಲ್ಲಿ ಆಂಧ್ರಪ್ರದೇಶದ ನಂದಗೋಪಾಲ್ ಕಿದಾಮಿ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.