ADVERTISEMENT

ರಾಷ್ಟ್ರೀಯ ಚೆಸ್: ಅನನ್ಯಾಗೆ ಕಂಚು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಮಂಗಳೂರು: ಕೊಡಗು ಜಿಲ್ಲೆಯ ಎಸ್.ಅನನ್ಯಾ ಚೆನ್ನೈನಲ್ಲಿ ಭಾನುವಾರ ಮುಕ್ತಾಯಗೊಂಡ ರ‌್ಯಾಮ್ಕ 26ನೇ ರಾಷ್ಟ್ರೀಯ 13 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತಮಿಳುನಾಡಿನ ಆರ್.ವೈಶಾಲಿ, 11 ಸುತ್ತುಗಳಿಂದ 10.5 ಅಂಕಗಳನ್ನು ಸಂಗ್ರಹಿಸಿ ಅಜೇಯ ಸಾಧನೆಯೊಡನೆ ಅಗ್ರಸ್ಥಾನ ಪಡೆದರು. ಗೋವಾದ ಸಾವಂತ್ ರಿಯಾ, ಕರ್ನಾಟಕದ ಅನನ್ಯಾ, ಮಹಾರಾಷ್ಟ್ರದ ತೇಜಸ್ವಿನಿ ಸಾಗರ್, ಬಕ್ಷಿ ರುತುಜಾ, ಆಂಧ್ರಪ್ರದೇಶದ ಪೊಟ್ಲೂರಿ ಸುಪ್ರೀತಾ ಮತ್ತು ತಮಿಳುನಾಡಿನ ಎ.ಎಸ್.ಸೌಗಂಧಿಕಾ ತಲಾ ಎಂಟು ಪಾಯಿಂಟ್ಸ್ ಸಂಗ್ರಹಿಸಿದ್ದರು. ಆದರೆ ಟೈಬ್ರೇಕರ್ ಆಧಾರದಲ್ಲಿ ಕ್ರಮವಾಗಿ ಎರಡರಿಂದ ಏಳರವರೆಗೆ ಸ್ಥಾನಗಳನ್ನು ಪಡೆದರು.

ಪೆರಿಯಾಮೆಟ್‌ನ ಬಹುಉದ್ದೇಶಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ ಅನನ್ಯಾ ವೈಶಾಲಿ ವಿರುದ್ಧ ಸೇರಿದಂತೆ 3 ಪಂದ್ಯಗಳನ್ನು ಸೋತರೂ, ಎಂಟು ಪಂದ್ಯ ಗೆದ್ದುಕೊಂಡಿದ್ದು ಪದಕದ ಸಾಧನೆಗೆ ಕಾರಣವಾಯಿತು. ಪ್ರಿಯಂವದಾ ಸುಂದರ್ (ತಮಿಳುನಾಡು), ತುಳಸಿ ಎಂ. (ಕರ್ನಾಟಕ), ಅಭಿರಾಮ ಶ್ರೀನಿಥಿ (ತಮಿಳುನಾಡು), ಬ್ರೀಷಾ ಗುಪ್ತ (ಮಹಾರಾಷ್ಟ್ರ), ಪಿ.ಸುಪ್ರೀತಾ (ಆಂಧ್ರ), ಸಾವಂತ್ ರಿಯಾ (ಗೋವಾ), ಮೀರಾ ಡಿ. (ತಮಿಳುನಾಡು), ತೇಜಸ್ವಿನಿ ಸಾಗರ್ (ಮಹಾರಾಷ್ಟ್ರ) ವಿರುದ್ಧ ಅನನ್ಯಾ ಜಯಗಳಿಸಿದ್ದರುು. ಕರ್ನಾಟಕದ ಮೇಘನಾ 9ನೇ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಎನ್.ಆರ್.ವಿಶಾಖ್ (10 ಪಾಯಿಂಟ್ಸ್) ವಿಜೇತನಾದರು. ಅಗ್ರ ಶ್ರೇಯಾಂಕದ ವಿ.ಆರ್.ಅರವಿಂದ್ ಚಿದಂಬರಂ (9.5) ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.