ಮುಂಬೈ (ಪಿಟಿಐ): ಕ್ರಿಕೆಟ್ ಜಗತ್ತಿನ ಯಶಸ್ವಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
`ಮುಂದಿನ ದಿನಗಳಲ್ಲಿ ಕೋಚ್ ಆಗಬಹುದು ಯಾರಿಗ್ಗೊತ್ತು?~ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ ಐದನೇ ಅವತರಣಿಕೆಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ರಾಹುಲ್ ಕೋಚ್ ಆಗಿ ಕೂಡ ಕಾರ್ಯನಿರ್ವಹಿಸಿದ್ದರು. `ನಾನು ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಜೊತೆಗೆ 1, 2, 3 ಮಟ್ಟದ ಕೋಚಿಂಗ್ ಅರ್ಹತೆಯನ್ನೂ ನಾನು ಹೊಂದಿಲ್ಲ~ ಎಂದಿದ್ದಾರೆ.
16 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ತುಂಬಾ ಸಿಟ್ಟಾಗಿದ್ದೂ ಇದೆ ಎಂದು ಬೆಂಗಳೂರಿನ ಬ್ಯಾಟ್ಸ್‌ಮನ್ ಹೇಳಿದ್ದಾರೆ. `ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದೆ. ಸಿಟ್ಟಿನಿಂದ ಬ್ಯಾಟ್ ಎಸೆದಿದ್ದೆ. ಈ ರೀತಿ ನನ್ನ ಕ್ರಿಕೆಟ್ ಜೀವನದದಲ್ಲಿ ಒಂದೆರಡು ಬಾರಿ ಆಗಿರಬಹುದು ಅಷ್ಟೆ. ಬ್ಯಾಟಿಂಗ್ ವೇಳೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಔಟ್ ಆದರೆ ಈ ರೀತಿ ಆಗುತಿತ್ತು. ಆದರೆ ನನಗೆ ಸಿಟ್ಟು ಬರುವುದು ತುಂಬಾ ಕಡಿಮೆ~ ಎಂದು ಮಾಜಿ ನಾಯಕ ರಾಹುಲ್ ವಿವರಿಸಿದ್ದಾರೆ.
ಇಷ್ಟು ವರ್ಷ ಆಡಿಯೂ ಡಿವಿಷನ್ ಲೀಗ್ ಕ್ರಿಕೆಟ್‌ನಲ್ಲಿ ಮತ್ತೆ ಪಾಲ್ಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಜಿ.ಆರ್.ವಿಶ್ವನಾಥ್ ಹಾಗೂ ಸುಧಾಕರ್ ರಾವ್ ಅವರು ನಿವೃತ್ತರಾದ ಬಳಿಕವೂ ಆಡುತ್ತಿದ್ದರು. ನನ್ನ ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಅವರೊಂದಿಗೆ ಲೀಗ್‌ನಲ್ಲಿ ಆಡಿದ್ದೆ. ಈಗ ಮತ್ತೆ ಆಡಲು ಖುಷಿಯಾಗುತ್ತಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.