ADVERTISEMENT

ರಿಕಿ ಪಾಂಟಿಂಗ್ ಚಕ್ರಾಧಿಪತ್ಯಕ್ಕೆ ಶೀಘ್ರ ಅಂತ್ಯ?

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿ 9 ವರ್ಷಗಳ ಕಾಲ ಮೆರೆದ ರಿಕಿ ಪಾಂಟಿಂಗ್ ತಮ್ಮ ಏಕಚಕ್ರಾಧಿಪತ್ಯವನ್ನು ಶೀಘ್ರದಲ್ಲಿಯೇ ಕಳೆದುಕೊಳ್ಳುವ ಭೀತಿಯಿದ್ದು,  ಮುಂದಿನ ತಿಂಗಳು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ತಂಡಕ್ಕೆ ಆ ದೇಶದ ಕ್ರಿಕೆಟ್ ಮಂಡಳಿ ಹೊಸ ನಾಯಕನನ್ನು ನೇಮಿಸುವ ಸಾಧ್ಯತೆ ದಟ್ಟವಾಗಿದೆ.ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗುರುವಾರ ಆಸ್ಟ್ರೇಲಿಯಾ ತಂಡ ಬಲಾಢ್ಯ ಭಾರತ ತಂಡವನ್ನು ಎದುರಿಸಲಿದೆ. ಫಾರ್ಮ್ ಕಳೆದುಕೊಂಡು ಅಸ್ಥಿರ ಆಟವಾಡುತ್ತಿರುವ ಪಾಂಟಿಂಗ್‌ಗೆ ನಾಯಕನಾಗಿ ಇದು ಕೊನೆಯ ವಾರವಾಗುವ ನಿರೀಕ್ಷೆಯೇ ಹೆಚ್ಚಾಗಿದೆ.

‘ಬಾಂಗ್ಲಾ ಪ್ರವಾಸದ ಸಂದರ್ಭದಲ್ಲಿ ತಂಡಕ್ಕೆ ಯಾರನ್ನು ನಾಯಕನನ್ನಾಗಿ ನೇಮಿಸಬೇಕು ಎಂಬ ವಿಷಯವಾಗಿ ಚರ್ಚೆ ನಡೆದಿದೆ. ಆದರೆ, ಆಟಗಾರನಾಗಿ ಪಾಂಟಿಂಗ್ ತಂಡದಲ್ಲಿ ಇರುವುದು ನಿಶ್ಚಿತ’ ಎಂದು ಮಂಡಳಿ ಸದಸ್ಯರೊಬ್ಬರು ಆಸ್ಟ್ರೇಲಿಯಾದ ಪತ್ರಿಕೆಗೆ ತಿಳಿಸಿದ್ದಾರೆ. ‘ಭವಿಷ್ಯದತ್ತ ನಮ್ಮ ದೃಷ್ಟಿ ನೆಟ್ಟಿದ್ದು, ಬದಲಾವಣೆಗೆ ಇದು ಸೂಕ್ತ ಸಮಯವೆನಿಸಿದೆ’ ಎಂದು ಅವರು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಆ್ಯಷಸ್‌ನಲ್ಲಿ ಆಸೀಸ್ ಸೋಲು ಕಂಡಾಗಲೇ ಪಾಂಟಿಂಗ್ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.

ಮೂರು ಸಲ ಆ್ಯಷಸ್ ಟ್ರೋಫಿ ಸೋತ ಆಸ್ಟ್ರೇಲಿಯಾ ತಂಡದ ಏಕೈಕ ನಾಯಕ ಎಂಬ ನೋವೂ ಪಾಂಟಿಂಗ್ ಅವರನ್ನು ಆವರಿಸಿಕೊಂಡಿತ್ತು. ಜಿಂಬಾಬ್ವೆ ಎದುರಿನ ಮೊದಲ ಪಂದ್ಯದ ಸಂದರ್ಭದಲ್ಲಿ ಟಿವಿ ಸ್ಕ್ರೀನ್ ಒಡೆದುಹಾಕಿದ್ದ ಪಾಂಟಿಂಗ್, ಐಸಿಸಿಯಿಂದ ಎಚ್ಚರಿಕೆಯನ್ನೂ ಪಡೆದಿದ್ದರು. ಬೇಡದ ಕಾರಣಗಳಿಗಾಗಿಯೇ ಸುದ್ದಿಯಲ್ಲಿರುವ ಪಾಂಟಿಂಗ್, ಇದೀಗ ಮಂಡಳಿಯಿಂದ ಮತ್ತೊಂದು ದೊಡ್ಡ ಪರೀಕ್ಷೆಯನ್ನು ಎದುರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.