ನವದೆಹಲಿ (ಪಿಟಿಐ): ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸಂಬಂಧ ಹೊಂದಿರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿರುವುದು ನಿಜ ಎಂಬುದು ಈಗ ಸಾಬೀತಾಗಿದೆ.
ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಕ್ರಮದ ಬಗ್ಗೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿರುವ ಮಂಡಳಿಯ ನೂತನ ಖಜಾಂಚಿ ರವಿ ಸಾವಂತ್, `ರಿತಿ'ಯೊಂದಿಗಿನ ಸಂಬಂಧವನ್ನು ಕೂಡಲೇ ಕಡಿದುಕೊಳ್ಳಬೇಕು ಎಂದು ಭಾರತ ತಂಡದ ನಾಯಕನಿಗೆ ತಾಕೀತು ಮಾಡಿದ್ದಾರೆ.
ತಮ್ಮ ಕ್ರೀಡಾ ವ್ಯವಹಾರ ನೋಡಿಕೊಳ್ಳುವ ರಿತಿ ಸ್ಪೋರ್ಟ್ಸ್‌ನಲ್ಲಿ ದೋನಿ ಷೇರು ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ, ಈ ಕಂಪೆನಿಯು ಭಾರತ ತಂಡದ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ಪ್ರಗ್ಯಾನ್ ಓಜಾ ಅವರ ಕ್ರಿಕೆಟ್ ವ್ಯವಹಾರವನ್ನು ನಿರ್ವಹಿಸುತ್ತಿದೆ. ಹಾಗಾಗಿ ದೋನಿ ಈಗ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ.
`ತಂಡದ ನಾಯಕರಾಗಿರುವ ದೋನಿ ತಕ್ಷಣವೇ ಆ ಕಂಪೆನಿಯ ವ್ಯವಹಾರದಿಂದ ಹೊರಬೇಕು. ಅಕಸ್ಮಾತ್ ಮಂಡಳಿಯೊಂದಿಗೆ ದೋನಿ ಮಾಡಿಕೊಂಡಿರುವ ಒಪ್ಪಂದಲ್ಲಿ ಈ ಅಂಶ ಇಲ್ಲ ಎಂದಾದರೆ ಅವರಿಗೆ ನೋಟಿಸ್ ನೀಡಬೇಕು' ಎಂದು ಸಾವಂತ್ ತಿಳಿಸಿದ್ದಾರೆ.
ಸೋಮವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆಗೆ ಬಂದಿದೆ. ಆದರೆ ದೋನಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಟೂರ್ನಿಯ ಬಳಿಕ ಮತ್ತೊಮ್ಮೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.