ADVERTISEMENT

ರೋಚಕ ಪಂದ್ಯದಲ್ಲಿ ಥಾಯ್ಲೆಂಡ್‌ಗೆ ಜಯ

ವಿಶ್ವಕಪ್ ಕಬಡ್ಡಿ: ಸೋತರೂ ಪ್ರೇಕ್ಷಕರ ಮನ ಗೆದ್ದ ಜಪಾನ್‌, ಅರ್ಜೆಂಟಿನಾ

ಪಿ.ಜಿ.ಪೂಣಚ್ಚ
Published 19 ಅಕ್ಟೋಬರ್ 2016, 20:28 IST
Last Updated 19 ಅಕ್ಟೋಬರ್ 2016, 20:28 IST
ಅರ್ಜೆಂಟಿನಾ ತಂಡದ ಆಟಗಾರರು ತಮ್ಮ ನಾಯಕನನ್ನು ಮೇಲಕ್ಕೆ ತೂರಿ ಖುಷಿಪಟ್ಟ ಕ್ಷಣ
ಅರ್ಜೆಂಟಿನಾ ತಂಡದ ಆಟಗಾರರು ತಮ್ಮ ನಾಯಕನನ್ನು ಮೇಲಕ್ಕೆ ತೂರಿ ಖುಷಿಪಟ್ಟ ಕ್ಷಣ   

ಅಹಮದಾಬಾದ್:  ಥಾಯ್ಲೆಂಡ್ ತಂಡ ವಿಶ್ವಕಪ್‌ ಕಬಡ್ಡಿಯ ಸೆಮಿಫೈನಲ್‌ ತಲುಪಿತು. ಪ್ರತಿಕ್ಷಣವೂ ಕುತೂಹಲ ಉಳಿಸಿಕೊಂಡಿದ್ದ ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಜಪಾನ್‌ 33–37ರಿಂದ ಸೋಲು ಕಂಡಿತು.

ಈ ಕೂಟದಲ್ಲಿ ಈವರೆಗೆ ನಡೆದ ಮೈನವಿರೇಳಿಸಿದಂತಹ ಕೆಲವೇ ಕೆಲವು ಪಂದ್ಯಗಳಲ್ಲಿ ಇದೂ ಒಂದು. ಪ್ರತಿ ನಿಮಿಷವೂ ರೋಚಕ ತಿರುವು ಕಂಡುಕೊಳ್ಳುತಿತ್ತು. ಮೊದಲ ನಿಮಿಷದಲ್ಲಿಯೇ ಎದುರಾಳಿ ಅಂಗಳಕ್ಕೆ ರೈಡಿಂಗ್‌ ಹೋದ ಥಾಯ್ಲೆಂಡ್‌ ನಾಯಕ ಕೊಮ್ಸಾನ್‌ ತೊಂಗಾಮ್‌ನನ್ನು ಜಪಾನ್‌ ಆಟಗಾರರು ಹಿಡಿದು ಹೊರ ಕಳಿಸಿದರು.

ಮತ್ತೆ ಒಳಬಂದ ತೊಂಗಾಮ್‌ 4ನೇ ನಿಮಿಷದಲ್ಲಿ ಹೊರ ಹೋಗಬೇಕಾಯಿತು. ಆದರೆ 8ನೇ ನಿಮಿಷದಲ್ಲಿ ತೊಂಗಾಮ್‌ ತಂದಿತ್ತ ಪಾಯಿಂಟ್ಸ್‌ನಿಂದ ಸ್ಕೋರು 5–5 ರಿಂದ ಸಮಗೊಂಡಿತು. ನಂತರ ವಿರಾಮದ ವರೆಗೂ ಪ್ರತಿ ನಿಮಿಷವೂ ಸ್ಕೋರು ಸಮಗೊಳ್ಳುತ್ತಲೇ ಹೋಯಿತು.

ಈ ನಡುವೆ 18ನೇ ನಿಮಿಷದಲ್ಲಿ ಥಾಯ್ಲೆಂಡ್‌ ಅಂಗಣವನ್ನು ಖಾಲಿ ಮಾಡಿದ  ಜಪಾನ್‌ 17–14ರಿಂದ ಮುನ್ನಡೆ ಗಳಿಸಿತು. ಆದರೆ ಜಪಾನ್‌ಗೆ ಈ ಖುಷಿ ಬಲು ಹೊತ್ತು ಇರಲಿಲ್ಲ. ತೊಂಗಾಮ್‌ ರೈಡಿಂಗ್‌ನಲ್ಲಿ 2 ಪಾಯಿಂಟ್ಸ್‌ ತಂದಿತ್ತರು. ವಿರಾಮದ ವೇಳೆಗೆ ಸ್ಕೋರು 17–17ರಿಂದ ಸಮಗೊಂಡಿತು.

ಉಭಯ ತಂಡಗಳೂ ರೈಡಿಂಗ್‌ ಮತ್ತು ಟ್ಯಾಕ್ಲಿಂಗ್‌ನಲ್ಲಿ ಕೊನೆಯ ಕ್ಷಣಗಳವರೆಗೆ ಸಮಬಲದ ಸಾಮರ್ಥ್ಯ ತೋರಿದವು. 27ನೇ ನಿಮಿಷದಲ್ಲಿ ಅಂತರ ಮತ್ತೆ 21ರಲ್ಲಿ ಸಮಗೊಂಡಿತ್ತು. ಆದರೆ 30ನೇ ನಿಮಿಷದಲ್ಲಿ ಜಪಾನ್‌ ತಂಡ 29–23ರಿಂದ ಮುನ್ನಡೆ ಗಳಿಸಿದಾಗ ಗ್ಯಾಲರಿಯಲ್ಲಿ ಕುಳಿತ್ತಿದ್ದ ಕೆನ್ಯಾದ ಆಟಗಾರರು ಎದ್ದು ನಿಂತು ಸಂಭ್ರಮಿಸಿದರು. ಏಕೆಂದರೆ ಜಪಾನ್‌ ಈ ಪಂದ್ಯದಲ್ಲಿ ಗೆದ್ದರೆ ಎ ಗುಂಪಿನಲ್ಲಿ ಥಾಯ್ಲೆಂಡ್‌, ಕೆನ್ಯಾ ಮತ್ತು ಜಪಾನ್‌ ತಂಡಗಳು ತಲಾ 15 ಪಾಯಿಂಟ್ಸ್‌ ಗಳಿಸುತ್ತವೆ. ಆಗ ಹೆಚ್ಚು ಪಾಯಿಂಟ್ಸ್‌ ಗಳಿಕೆಯ ಲೆಕ್ಕಾಚಾರದಲ್ಲಿ ಕೆನ್ಯಾ ಮೇಲುಗೈ ಸಾಧಿಸುವುದು ನಿಚ್ಚಳ.

ಪಂದ್ಯ ಮುಗಿಯಲು 5 ನಿಮಿಷಗಳಿವೆ ಎನ್ನುವಾಗ ಜಪಾನ್‌ ತಂಡ ಆಲ್ಔಟ್‌ ಆಗಿದ್ದರಿಂದ ಅಂತರ ಮತ್ತೆ 32–32ರಿಂದ ಸಮಗೊಂಡಿತು. ನಂತರ ಥಾಯ್ಲೆಂಡ್‌ ರೈಡಿಂಗ್‌ ಮತ್ತು ಟ್ಯಾಕ್ಲಿಂಗ್‌ನಲ್ಲಿ ಮಿಂಚು ಹರಿಸುತ್ತಾ ಪಾಯಿಂಟ್ಸ್‌ ಹೆಚ್ಚಿಸಿಕೊಂಡಿತು.

ಥಾಯ್ಲೆಂಡ್‌ ತಂಡ ರೈಡಿಂಗ್‌ನಲ್ಲಿ 18 ಪಾಯಿಂಟ್ಸ್‌ ಗಳಿಸಿದರೆ, ಜಪಾನ್‌ 12 ಪಾಯಿಂಟ್ಸ್‌ ಗಳಿಸಿತು. ಟ್ಯಾಕ್ಲಿಂಗ್‌ನಲ್ಲಿ ಥಾಯ್ಲೆಂಡ್‌ಗಿಂತ (11) ಜಪಾನ್‌ ತಂಡವೇ (17) ಹೆಚ್ಚು ಪಾಯಿಂಟ್ಸ್‌ ಗಳಿಸಿತು.

ವಿಜಯೀ ತಂಡದ ಪರ ಕೊಮ್ಸಾನ್‌ ತೊಂಗಾಮ್‌ ಮತ್ತು ಸಾಂತಿ ಬಂಚೋರ್‌ ಕ್ರಮವಾಗಿ 10 ಮತ್ತು 5 ಪಾಯಿಂಟ್ಸ್‌ ಗಳಿಸಿದರೆ, ಜಪಾನ್‌ ಪರ ಟಕಮಿಟ್ಸು ಕೊನೊ (8) ಮತ್ತು ಕಜುಹಿರೊ ಟಕನೊ (7) ಗಮನ ಸೆಳೆದರು. ಥಾಯ್ಲೆಂಡ್‌ ತಂಡ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ ಆಡಲಿದೆ.

ಬಾಂಗ್ಲಾದೇಶಕ್ಕೆ ಜಯ: ಈ ಟೂರ್ನಿಯಲ್ಲಿ ಒಂದು ಪಂದ್ಯವನ್ನಾದರೂ ಗೆಲ್ಲಲೇ ಬೇಕೆಂದು ಪಣತೊಟ್ಟಂತಿದ್ದ ಅರ್ಜೆಂಟಿನಾ, ಪ್ರಬಲ ಬಾಂಗ್ಲಾದೇಶ ತಂಡದ ಆಟಗಾರರು 67–26ರಿಂದ ಗೆಲುವು ಸಾಧಿಸ ಬೇಕಿದ್ದರೆ  ಸಾಕಷ್ಟು ಬೆವರು ಹರಿಸುವಂತೆ ಮಾಡಿದರು. ಅರ್ಜೆಂಟಿನಾ ಅತಿ ಹೆಚ್ಚು ಪಾಯಿಂಟ್ಸ್‌ ಗಳಿಸಲಿಲ್ಲ, ಆದರೆ ತಮ್ಮ ಆಕರ್ಷಕ ಆಟದಿಂದ ಗಮನ ಸೆಳೆದರು.

ಮೊದಲ ಪಾಯಿಂಟ್ ಗಳಿಸಲು ಅರ್ಜೆಂಟಿನಾ 6ನೇ ನಿಮಿಷದವರೆಗೆ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಬಾಂಗ್ಲಾ 16 ಪಾಯಿಂಟ್ಸ್‌ ಗಳಿಸಿತ್ತು. ನಂತರದ 14 ನಿಮಿಷಗಳಲ್ಲಿ 15 ಪಾಯಿಂಟ್ಸ್‌ ಗಳಿಸಿದ ಅರ್ಜೆಂಟಿನಾದ ಆಟದ ಪರಿ ಅನನ್ಯ. ಉತ್ತರಾರ್ಧದಲ್ಲಿಯೂ ಪಾಯಿಂಟ್ಸ್‌ಗಳಿಕೆಯಲ್ಲಿ ಗಮನ ಸೆಳೆಯಲಿಲ್ಲವಾದರೂ, ಕೆಲವೇ ಕೆಲವು ಸೂಪರ್‌ ರೈಡ್‌ಗಳಿಂದ ಪ್ರೇಕ್ಷಕರ ಮನಗೆದ್ದಿತು. ಅನನುಭವಿ ಅರ್ಜೆಂಟಿನಾದ ಎದುರು ಪಾಯಿಂಟ್ ‘ಸೂರೆ’ ಮಾಡಬಹುದೆಂದು ಕೊಂಡಿದ್ದ ಬಾಂಗ್ಲಾದೇಶಕ್ಕೆ ಅಚ್ಚರಿಯ ಪ್ರತಿರೋಧ ಕಂಡು ಬಂದಿತು.

ಮಹಮ್ಮದ್‌ ಅರ್ದುಜಮಾನ್‌ ಮುನ್ಶಿ ಈ ಪಂದ್ಯಕ್ಕೆ ಮೊದಲು ಈ ಕೂಟದಲ್ಲಿ ಅತ್ಯಧಿಕ ರೈಡಿಂಗ್‌ ಪಾಯಿಂಟ್ಸ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು.

ಬಾಂಗ್ಲಾ ಪರ ತುಹಿನ್‌ ತರಫ್‌ದಾರ್‌ ರೈಡಿಂಗ್‌ನಲ್ಲಿ 14 ಪಾಯಿಂಟ್ಸ್‌ ಗಳಿಸಿದರೆ, ಅರ್ದುಮಾನ್‌ ಮುನ್ಶಿ 13 ಪಾಯಿಂಟ್ಸ್‌ ಗಳಿಸಿದರು. ಅರ್ಜೆಂಟಿನಾ ಪರ ಯೂಜೆನಿಯೊ ಪೀಟರ್‌ಮನ್‌ ಮತ್ತು ನೋಯೆಲ್‌ ಲೋಪೆಜ್‌ ಕ್ರಮವಾಗಿ 8 ಮತ್ತು 5 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

ಬಾಂಗ್ಲಾ ರೈಡಿಂಗ್‌ನಲ್ಲಿ ಒಟ್ಟು 42 ಪಾಯಿಂಟ್ಸ್‌ ಗಳಿಸಿದರೆ, ಅರ್ಜೆಂಟಿನಾ 23 ಪಾಯಿಂಟ್ಸ್‌ ಪಡೆಯಿತು. ಆದರೆ ಟ್ಯಾಕ್ಲಿಂಗ್‌ನಲ್ಲಿ ಮಿಂಚಿದ ಬಾಂಗ್ಲಾ 14 ಪಾಯಿಂಟ್ಸ್‌ ಗಳಿಸಿದರೆ, ಅರ್ಜೆಂಟಿನಾ ಕೇವಲ 2 ಪಾಯಿಂಟ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಬಾಂಗ್ಲಾ 6ನೇ ನಿಮಿಷದಲ್ಲಿ ಮೊದಲ ಆಲ್‌ಔಟ್‌ ಪಾಯಿಂಟ್ಸ್‌ ಗಳಿಸಿತು. ನಂತರ 21ನೇ ನಿಮಿಷ, 30ನೇ ನಿಮಿಷ ಮತ್ತು 34ನೇ ನಿಮಿಷಗಳಲ್ಲಿಯೂ ಅರ್ಜೆಂಟಿನಾ ಅಲೌಟ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT