ADVERTISEMENT

ರ್ಯಾಲಿ: ಮುಂಚೂಣಿಯಲ್ಲಿ ರಾಣಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಜೈಸಲ್ಮೇರ್ (ರಾಜಸ್ತಾನ): ಪೋಖ್ರಾನ್‌ನಲ್ಲಿ ಅಣು ಸ್ಫೋಟಕ್ಕೆ ಸಾಕ್ಷಿಯಾಗಿದ್ದ ಸ್ಥಳದ ಹತ್ತಿರದಿಂದ ಭರ‌್ರೆಂದು ತಮ್ಮ ಜಿಪ್ಸಿ ಓಡಿಸಿಕೊಂಡು ಬಂದ ಥಂಡರ್ ಬೋಲ್ಟ್ ತಂಡದ ಸುರೇಶ್ ರಾಣಾ ಬುಧವಾರ ಸಂಜೆ ಕೊನೆಗೊಂಡ ಎಕ್ಸ್‌ಟ್ರೀಮ್ ವಿಭಾಗದ ಐದು ಹಂತದ ಸ್ಪರ್ಧೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡರು.

ಮಾರುತಿ ಸುಜುಕಿ ಸಂಸ್ಥೆ ಏರ್ಪಡಿಸಿರುವ ಹತ್ತನೇ ವರ್ಷದ ಮೋಟಾರ್ ರ್ಯಾಲಿ `ಡಸರ್ಟ್  ಸ್ಟಾರ್ಮ್~ ಸ್ಫರ್ಧೆಯ ಆರಂಭಿಕ ಹಂತದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದಿರುವ ರಾಣಾ, ಎರಡನೇ ದಿನವೂ ಅಗ್ರಪಟ್ಟವನ್ನು ಇತರ ಎದುರಾಳಿಗಳಿಗೆ ಬಿಟ್ಟುಕೊಡಲಿಲ್ಲ. ಅಶ್ವಿನ್ ನಾಯಕ್ ಅವರನ್ನು ಸಹ ಚಾಲಕನ ರೂಪದಲ್ಲಿ ಹೊಂದಿರುವ ರಾಣಾ, ಮರಳುಗಾಡಿನಲ್ಲಿ ತಮ್ಮ ಪ್ರತಾಪವನ್ನು ಚೆನ್ನಾಗಿಯೇ ತೋರಿದರು.

ಬಿಕಾನೇರ್‌ನಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸ್ಪರ್ಧಿಗಳು, ಬೆಳಿಗ್ಗೆ 9ಕ್ಕೆ ಜಾಲವಾಲಿ ಎಂಬ ಮರಭೂಮಿ ಹಳ್ಳಿಯಲ್ಲಿ ತಮ್ಮ ದಿನದ ಕಲಾಪ ಆರಂಭಿಸಿದರು. ಟ್ರ್ಯಾಕ್ ಮೇಲೆ ಮೇಲಿಂದ ಮೇಲೆ ನುಗ್ಗುತ್ತಿದ್ದ ಒಂಟೆ ಗಾಡಿಗಳು ಸ್ಪರ್ಧಿಗಳಿಗೆ ದೊಡ್ಡ ಸವಾಲು ಒಡ್ಡಿದವು. ಆರ್ಮಿ ಅಡ್ವೆಂಚರ್ ತಂಡದ ಮೇಜರ್ ಎ.ಎಸ್. ಬ್ರಾರ್ ಓಡಿಸುತ್ತಿದ್ದ ಕಾರು ಹಸುವೊಂದಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾಯಿತು.

ADVERTISEMENT

ಸ್ಪರ್ಧೆಯ ಹಾದಿಯಲ್ಲಿದ್ದ ಕುರುಚಲು ಕಾಡಿನಲ್ಲಿ ಮೇಯಲು ಬಂದಿದ್ದ ದನ-ಕರುಗಳು ವಾಹನಗಳು ಎಬ್ಬಿಸಿದ್ದ ಭಾರಿ ಸದ್ದಿಗೆ ಬೆಚ್ಚಿ ಓಡಿದವು. ಆಗ ಅಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೇವಲ ಒಂಟೆ ಗಾಡಿಗಳನ್ನು ನೋಡಿ ಗೊತ್ತಿದ್ದ ಹಳ್ಳಿಗರು, ಉಸುಕನ್ನು ಗಗನಕ್ಕೆ ಚಿಮ್ಮಿಸುತ್ತಾ ಓಡುವ ಕಾರುಗಳನ್ನು ಮೂಕ ವಿಸ್ಮಿತರಾಗಿ ನೋಡಿದರು. 410 ಕಿ.ಮೀ. ಉದ್ದದ ಯಾತ್ರೆಯಲ್ಲಿ ಚಾಲಕರಿಗೆ ಮೊದಲ ದಿನಕ್ಕಿಂತಲೂ ಹೆಚ್ಚಿನ ಅಡೆತಡೆ ಗಳು ಎದುರಾದವು.ಜಾರುವ ಉಸುಕು, ಎದುರಾಗುವ ಗುಡ್ಡ, ದಾರಿಯಲ್ಲಿ ಅಡ್ಡಬರುವ ಗಿಡ-ಗಂಟಿಗಳ ಸವಾಲನ್ನು ಮೆಟ್ಟಿನಿಂತು, ಚಾಲಕರು ಕಾರುಗಳನ್ನು ಓಡಿಸುತ್ತಿದ್ದ ಪರಿ ರೋಚಕವಾಗಿತ್ತು.

ಎರಡನೇ ದಿನದ ಅಂತ್ಯಕ್ಕೆ ಅನ್ವರ್ ಖಾನ್ ಮತ್ತು ಶಾದಾಬ್ ಪರ್ವೇಜ್ ಜೋಡಿ ಎರಡನೇ ಸ್ಥಾನದಲ್ಲಿದ್ದರೆ, ಪರ್‌ಫೆಕ್ಟ್ ರ್ಯಾಲಿ ತಂಡದ ಅಭಿಷೇಕ್ ಮಿಶ್ರಾ ಮತ್ತು ಹನುಮಂತ್ ಸಿಂಗ್ ಅವರ ತಂಡ ಮೂರನೇ ಸ್ಥಾನದಲ್ಲಿದೆ. ಲೆಫ್ಟಿ ನಂಟ್ ಕರ್ನಲ್ ಶಕ್ತಿ ಬಜಾಜ್ ಮತ್ತು ಮೇಜರ್ ಭರತ್ ಭೂಷಣ್ ಅವರಿದ್ದ ಆರ್ಮಿ ಅಡ್ವೆಂಚರ್ ತಂಡ ನಾಲ್ಕನೇ ಸ್ಥಾನದೊಂದಿಗೆ ರಾತ್ರಿಯ ನಿದ್ದೆಗೆ ಜಾರಿತು.

ವಾಹನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಲೆಫ್ಟಿನಂಟ್ ಕರ್ನಲ್ ಸುಬೋಧ್ ವರ್ಮಾ ಮತ್ತು ಮೇಜರ್ ರಾಜೇಶ್ ಸಿಂಗ್ ಅವರಿದ್ದ ಆರ್ಮಿ ಅಡ್ವೆಂಚರ್ ತಂಡ ಸ್ಪರ್ಧೆಯಿಂದ ಹಿಂದೆ ಸರಿಯಿತು. ವಾಹನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡರೂ ಛಲ ಬಿಡದೆ ತಮ್ಮ ಕಾರು ಓಡಿಸಿದ ಗೌರವ್ ಗಿಲ್ ದಿನದ ಎರಡನೇ ಹಂತದಲ್ಲಿ ಅತ್ಯಂತ ವೇಗವಾಗಿ ಗುರಿ ತಲುಪಿದರು.

ಮೋಟೋಕ್ವಾಡ್‌ನಲ್ಲಿ ರಾಜ್‌ಸಿಂಗ್ ರಾಠೋಡ್, ರಾಹುಲ್ ಸೋನಿ, ಪ್ರಮೋದ್ ಜಸುವಾ, ಆರ್.ನಟರಾಜ್ ಮತ್ತು ವೀರೇಂದ್ರ ವಘೇಲಾ ಮೊದಲ ಐದು ಸ್ಥಾನದಲ್ಲಿ ವಿರಾಜಮಾನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.