ನವದೆಹಲಿ (ಪಿಟಿಐ): ಸ್ಪರ್ಧಾ ಕಣದಲ್ಲಿರುವ 81 ಅಥ್ಲೀಟ್‌ಗಳು ಸೇರಿದಂತೆ ಒಟ್ಟು 142 ಸದಸ್ಯರ ಭಾರತ ತಂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಹೇಳಿದೆ.
ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ), ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್) ಸಿಬ್ಬಂದಿ ಸಹ ಇದರಲ್ಲಿ ಸೇರಿದ್ದಾರೆ.
ಅಥ್ಲೀಟ್‌ಗಳ ಜತೆಗೆ 36 ಜನ ಕೋಚ್, ನಾಲ್ಕು ಜನ ಮ್ಯಾನೇಜರ್, ಎಂಟು ಮಂದಿ ವೈದ್ಯಕೀಯ ಸಿಬ್ಬಂದಿ, ಆರು ಜನ `ಪಿ~ ವಿಭಾಗದ ಸಿಬ್ಬಂದಿ, ಏಳು ಜನ ಅಧಿಕಾರಿಗಳು ಭಾರತ ತಂಡದಲ್ಲಿದ್ದಾರೆ.
ಅನಿರೀಕ್ಷಿತ ಅವಕಾಶ: `ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ದೊರೆತ ಈ ಅನಿರೀಕ್ಷಿತ ಅವಕಾಶದ ಪ್ರಯೋಜನ ಪಡೆಯುತ್ತೇನೆ. ಇದು ನನ್ನ ಪಾಲಿಗೆ ಮೊದಲ ಹಾಗೂ ಕೊನೆಯ ಒಲಿಂಪಿಕ್ಸ್~ ಎಂದು 19 ವರ್ಷದ ಯುವ ಕುಸ್ತಿಪಟು ಅಮಿತ್ ಕುಮಾರ್ ಹೇಳಿದ್ದಾರೆ.
`2016ರ ಒಲಿಂಪಿಕ್ಸ್ ಕೂಟಕ್ಕಾಗಿ ಅಭ್ಯಾಸ ನಡೆಸುತ್ತಿದ್ದೆ. ಈ ಸಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತೇನೆ ಎಂದು ಖಂಡಿತವಾಗಿಯೂ ನಿರೀಕ್ಷೆ ಮಾಡಿರಲಿಲ್ಲ. ಆದ್ದರಿಂದ ಮುಂದಿನ ಒಲಿಂಪಿಕ್ಸ್ ಬಗ್ಗೆ ಯೋಚನೆ ಮಾಡುವುದಿಲ್ಲ. ಇದು ಕೊನೆಯ ಒಲಿಂಪಿಕ್ಸ್. ಈ ಮಾತಿಗೆ ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ~ ಎಂದು ಅಮಿತ್ ತಿಳಿಸಿದ್ದಾರೆ.
`ಇತ್ತೀಚಿನ ದಿನಗಳಲ್ಲಿ ಮಾಡಿರುವ ಸಾಧನೆಯನ್ನು ನೋಡಿದರೆ, ಲಂಡನ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತೇನೆ ಎನ್ನುವ ವಿಶ್ವಾಸವಿದೆ. ಬೆಲಾರಸ್‌ನಲ್ಲಿ ಅಂತಿಮ ತರಬೇತಿಗೆ ತೆರಳುತ್ತಿದ್ದೇವೆ. ಈ ಶಿಬಿರದಲ್ಲಿ ರಕ್ಷಣಾ ಕೌಶಲ ಹಾಗೂ `ಕೌಂಟರ್ ದಾಳಿ~ಯ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ~ ಎಂದೂ ನುಡಿದರು.
`ಶಿಬಿರದಲ್ಲಿ ಹೆಚ್ಚು ಅಭ್ಯಾಸದತ್ತ ಗಮನ ಹರಿಸುತ್ತೇನೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ~ ಎಂದು ಅಮಿತ್ ಕುಮಾರ್ ನುಡಿದಿದ್ದಾರೆ.
ಇದರ ಜೊತೆಗೆ 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮಾಜಿ `ಪೈಲ್ವಾನ್~ ಬ್ರಾಂಡನ್ ಸ್ಲೈ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ. ಅವರೊಂದಿಗೆ ಚರ್ಚಿಸಿ ಕೌಶಲಗಳನ್ನು ತಿಳಿದುಕೊಳ್ಳುತ್ತೇನೆ~ ಎಂದು ಅಮಿತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.