ADVERTISEMENT

ವಾಲಿಬಾಲ್: ಸೆಮಿಗೆ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಧಾರವಾಡ: ಹಾಲಿ ಚಾಂಪಿಯನ್ ಬೆಂಗಳೂರು, ಮೈಸೂರು, ವಾರಂಗಲ್ ಹಾಗೂ ವಿಶಾಖಪಟ್ಟಣ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಎಲ್‌ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಸೆಮಿ ಫೈನಲ್‌ಗೆ ಮುನ್ನಡೆ ಪಡೆದಿವೆ.

ಶುಕ್ರವಾರ ಬೆಳಿಗ್ಗೆ ನಡೆಯುವ ಸೆಮಿ ಫೈನಲ್ ಪಂದ್ಯಗಳಲ್ಲಿ ಬೆಂಗಳೂರು ತಂಡ ಮೈಸೂರನ್ನು ಹಾಗೂ ವಾರಂಗಲ್ ತಂಡ ವಿಶಾಖಪಟ್ಟಣವನ್ನು ಎದುರಿಸಲಿವೆ. ವಾರಂಗಲ್ ತಂಡ ಕಳೆದ ವರ್ಷ ರನ್ನರ್ಸ್‌ ಅಪ್ ಆಗಿತ್ತು.

ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಅಂತರರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಪರಿಣಾಮ ಬೆಂಗಳೂರು ತಂಡ 25-8, 25-4, 25-8ರಿಂದ ಬೆಳಗಾವಿ ತಂಡವನ್ನು ಸುಲಭವಾಗಿ ಮಣಿಸಿತು. ಮೈಸೂರು ತಂಡಕ್ಕೂ 25-11, 25-9, 25-12ರಿಂದ ಕರೀಂನಗರ ತಂಡದ ವಿರುದ್ಧ ಗೆಲುವು ಸಾಧಿಸಲು ಹೆಚ್ಚಿನ ಬೆವರು ಹರಿಸುವ ಪ್ರಸಂಗ ಬರಲಿಲ್ಲ. 

ವಾರಂಗಲ್ ತಂಡ 25-10, 25-11, 25-16ರಿಂದ ಹೈದರಾಬಾದ್ ತಂಡದ ವಿರುದ್ಧ ಜಯಿಸಿದರೆ, ವಿಶಾಖಪಟ್ಟಣ ತಂಡ 25-19, 25-14, 25-11ರಿಂದ ಉಡುಪಿ ತಂಡವನ್ನು ಪರಾಭವಗೊಳಿಸಿ ಸೆಮಿ ಫೈನಲ್ ಪ್ರವೇಶಿಸಿತು. ಮೂರನೇ ನೇರ ಸೋಲು ಅನುಭವಿಸಿದ ಆತಿಥೇಯ ಧಾರವಾಡ ತಂಡಕ್ಕೆ ನಾಕೌಟ್ ಹಂತ ತಲುಪಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.