ADVERTISEMENT

ವಾಲಿಬಾಲ್: ಹರಿಯಾಣ, ಮಣಿಪುರ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಮರಿಯಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ತೀವ್ರ ಪೈಪೋಟಿಯ ನಂತರ ಕರ್ನಾಟಕ ಬಾಲಕಿಯರನ್ನು ಮಣಿಸಿದ ಹರಿಯಾಣ ತಂಡ ಇಲ್ಲಿ ಶನಿವಾರ ಮುಕ್ತಾಯಗೊಂಡ 14 ವರ್ಷದೊಳಗಿನ ಶಾಲಾ ಮಕ್ಕಳ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇಲ್ಲಿನ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ 3-1 (25-18, 25-11, 24-26, 25-22)ರಿಂದ ಜಯಭೇರಿ ಬಾರಿಸಿತು.

ಪೂಜಾ, ಪೂನಂ, ಪ್ರೀತಿ, ವಿಜೇತ, ಅಮನ್‌ಪ್ರೀತ್ ಮುಂತಾದವರ ಉತ್ತಮ ಆಟದ ನೆರವಿನಿಂದ ಹರಿಯಾಣ ಮೊದಲೆರಡು ಸೆಟ್‌ಗಳನ್ನು ಗೆದ್ದುಕೊಂಡು ಸುಲಭವಾಗಿ ಪ್ರಶಸ್ತಿಗೆ ಮುತ್ತಿಡುವತ್ತ ದಾಪುಗಾಲು ಹಾಕಿತು.

ಆದರೆ ನಾಯಕಿ ಪವಿತ್ರ ನೇತೃತ್ವದಲ್ಲಿ ಮರು ಹೋರಾಟ ನಡೆಸಿದ ಕರ್ನಾಟಕ ಮೂರನೇ ಸೆಟ್ ಗೆದ್ದು ಪಂದ್ಯವನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿತು. ಪ್ರತಿಭಾ, ನಿರ್ಮಲಾ, ವೀಣಾ, ವಾಣಿ, ಕಾವೇರಿ, ಪೂಜಾ ಹಾಗೂ  ಪೂಜಾದಾಸ್ ಮೆಚ್ಚುಗೆಯ ಆಟ ಆಡಿದರು.

ಬಾಲಕರ ವಿಭಾಗದಲ್ಲಿ ಎದುರಾಳಿ ಉತ್ತರ ಪ್ರದೇಶ ತಂಡವನ್ನು ಸುಲಭವಾಗಿ ಮಣಿಸಿದ (25-11, 10-25, 25-18, 25-19) ಮಣಿಪುರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಂಗ್‌ತೋಯಿ, ದೇವೇಂದ್ರ, ಬುದ್ಧಚಂದ್ರ, ಸುನಿಲ್, ಮಣಿತೋಂಬ, ರವಿ, ನೌವಾ, ಸದಾನಂದ್ ಹಾಗೂ ಬಿಸ್ವಾರ್ಥ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಾಸಕ ಕೆ.ನೇಮಿರಾಜ್ ನಾಯ್ಕ, ಡಿಡಿಪಿಐ ಡಾ.ಎಚ್.ಬಾಲರಾಜ್, ಎಸ್.ಜಿ.ಎಫ್.ಐನ ಸಹನಿರ್ದೇಶಕ ಪ್ರಶಾಂತ್ ತ್ರೀವೇದಿ, ರಾಜ್ಯ ವಾಲಿಬಾಲ್ ಸಂಸ್ಥೆಯ ವೆಂಕಟೇಶ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ಪರಿವೀಕ್ಷಕರಾದ ಶರಣಪ್ಪ ಹಾಲಕೇರಿ, ರೆಹಮತ್ ಉಲ್ಲಾ, ಎನ್. ಸತ್ಯನಾರಾಯಣ ಪ್ರಶಸ್ತಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.