ADVERTISEMENT

ವಿಂಡೀಸ್ ಚುಟುಕು ಕ್ರಿಕೆಟ್ ದೊರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಕೊಲಂಬೊ: ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ಶಕ್ತಿಯಾಗಿ ಮೆರೆದಿದ್ದ ವೆಸ್ಟ್ ಇಂಡೀಸ್ ಮತ್ತೆ ಪುಟಿದೆದ್ದು ನಿಂತಿದೆ. ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಗ್ದ್ದೆದುಕೊಂಡ ಕೆರಿಬಿಯನ್ ನಾಡಿನ ತಂಡ ಗತವೈಭವಕ್ಕೆ ಮರಳುವ ಸೂಚನೆ ನೀಡಿದೆ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಅದು 36 ರನ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ತವರು ಪ್ರೇಕ್ಷಕರ ಎದುರು ಟ್ರೋಫಿ ಎತ್ತಿ ಹಿಡಿಯಬೇಕೆಂಬ ಲಂಕಾ ತಂಡದ ಕನಸು ಇದರೊಂದಿಗೆ ಭಗ್ನಗೊಂಡಿತು.

ವಿಂಡೀಸ್ ಈ ಬಾರಿ ಕಪ್ ಗೆಲ್ಲಲಿದೆ ಎಂದು ಟೂರ್ನಿಗೆ ಮುನ್ನ ಯಾರೂ ಲೆಕ್ಕಾಚಾರ ಹಾಕಿರಲಿಲ್ಲ. ಆದರೆ ಅದ್ಭುತ ಪ್ರದರ್ಶನ ನೀಡಿದ ತಂಡ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಮಿರುಗುವ ಟ್ರೋಫಿ ಎತ್ತಿಹಿಡಿಯಿತು.  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಪೇರಿಸಿತು. ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿದ್ದ ಕ್ರಿಸ್ ಗೇಲ್ ವಿಫಲರಾದರೂ ಮಾರ್ಲೊನ್ ಸ್ಯಾಮುಯೆಲ್ಸ್ (78) ಅಬ್ಬರದ ಆಟ ಆಡಿ ಸವಾಲಿನ ಮೊತ್ತ ತಲುಪಲು ನೆರವಾದರು.

ಆತಿಥೇಯ ತಂಡ 18.4 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲ್ ಔಟಾಯಿತು. ಸುನಿಲ್ ನಾರಾಯಣ್ (9ಕ್ಕೆ 3) ಮತ್ತು ಡರೆನ್ ಸಮಿ (6ಕ್ಕೆ 2) ಸಮರ್ಥ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಕಟ್ಟಿಹಾಕಿದರು.  ವಿಂಡೀಸ್ 1979 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಆ ಬಳಿಕ ಕೆರಿಬಿಯನ್ ನಾಡಿನ ತಂಡ ಇದೇ ಮೊದಲ ಬಾರಿಗೆ ಮಹತ್ವದ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.