ಲಂಡನ್ (ರಾಯಿಟರ್ಸ್): ಪೋಲೆಂಡ್‌ನ ಅಗ್ನೀಸ್ಕಾ ರದ್ವಾಂಸ್ಕಾ ಒಡ್ಡಿದ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಂತ ಅಮೆರಿಕದ ಸೆರೆನಾ ವಿಲಿಯಮ್ಸ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಸೆರೆನಾ 6-1, 5-7, 6-2 ರಲ್ಲಿ ಗೆಲುವು ಪಡೆದರು. ಈ ಮೂಲಕ ಐದನೇ ವಿಂಬಲ್ಡನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಮೆರಿಕದ ಆಟಗಾರ್ತಿಗೆ ಒಲಿದ 14ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದಾಗಿದೆ.
30ರ ಹರೆಯದ ಸೆರೆನಾ ಅವರು ಮಾರ್ಟಿನಾ ನವ್ರಾಟಿಲೋವಾ ಬಳಿಕ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆದ ಅತಿ ಹಿರಿಯ ಆಟಗಾರ್ತಿ ಎನಿಸಿಕೊಂಡರು. ನವ್ರಾಟಿಲೋವಾ 1990 ರಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.
ಎರಡು ಗಂಟೆಗಳ ಹೋರಾಟದ ಕೊನೆಯಲ್ಲಿ ಬ್ಯಾಕ್‌ಹ್ಯಾಂಡ್ ವಿನ್ನರ್ ಸಿಡಿಸಿ ಗೆಲುವು ಪಡೆಯುತ್ತಿದ್ದಂತೆಯೇ ಸೆರೆನಾ ಸೆಂಟರ್ ಕೋರ್ಟ್‌ನ ಹುಲ್ಲುಹಾಸಿನ ಮೇಲೆ ಅಂಗಾತ ಮಲಗಿದರು. ಬಳಿಕ ಕುಟುಂಬ ಸದಸ್ಯರ ಬಳಿ ತೆರಳಿ ಸಂಭ್ರಮದಲ್ಲಿ ಪಾಲ್ಗೊಂಡರು.
ಸೆರೆನಾ ಫೈನಲ್ ಪಂದ್ಯದಲ್ಲಿ ಅಬ್ಬರದ ಆರಂಭ ಪಡೆದಿದ್ದರು. ಮೊದಲ ಸೆಟ್‌ನ್ನು 36 ನಿಮಿಷಗಳಲ್ಲಿ ತಮ್ಮದಾಗಿಸಿಕೊಂಡರು. ಅವರು ಎದುರಾಳಿಗೆ ಕೇವಲ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟರು. ಎರಡು ಬಾರಿ ಎದುರಾಳಿಯ ಸರ್ವ್ ಮುರಿದ ಅಮೆರಿಕದ ಆಟಗಾರ್ತಿ ಆಕ್ರಮಣಕಾರಿ ಮೂಡ್‌ನಲ್ಲಿದ್ದರು.
ರದ್ವಾಂಸ್ಕಾ ಮೊದಲ ಸೆಟ್‌ನಲ್ಲಿ ನೀಡಿದ ಪ್ರದರ್ಶನ ನೋಡಿದಾಗ ಪಂದ್ಯ ಏಕಪಕ್ಷೀಯವಾಗಿ ಕೊನೆಗೊಳ್ಳಲಿದೆ ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಪೋಲೆಂಡ್‌ನ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಕಾರಣ ಪಂದ್ಯಕ್ಕೆ ರೋಚಕತೆ ಬಂತು.
ಎರಡನೇ ಸೆಟ್ ವೇಳೆ ಪಂದ್ಯಕ್ಕೆ ಕೆಲಹೊತ್ತು ಮಳೆ ಅಡ್ಡಿಪಡಿಸಿತು. ಈ ಸೆಟ್‌ನ ಆರಂಭದಲ್ಲಿ ಸೆರೆನಾ ಮೇಲುಗೈ ಪಡೆದಿದ್ದರು. ಆದರೆ ಮರುಹೋರಾಟ ನಡೆಸಿದ ರದ್ವಾಂಸ್ಕಾ 4-4 ರಲ್ಲಿ ಸಮಬಲ ಸಾಧಿಸಿದರಲ್ಲದೆ, ಬಳಿಕ 6-5ರ ಮುನ್ನಡೆ ಪಡೆದರು. ಮುಂದಿನ ಗೇಮ್ ತಮ್ಮದಾಗಿಸಿಕೊಂಡ ರದ್ವಾಂಸ್ಕಾ ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು.
ಮೂರನೇ ಸೆಟ್‌ನ ಒಂದು ಹಂತದಲ್ಲಿ ಸೆರೆನಾ 1-2 ರಲ್ಲಿ ಹಿನ್ನಡೆಯಲ್ಲಿದ್ದರು. ಆ ಬಳಿಕ ಅದ್ಭುತ ಪ್ರದರ್ಶನ ನೀಡಿ ಮುಂದಿನ ಐದೂ ಗೇಮ್‌ಗಳನ್ನು ಗೆದ್ದುಕೊಂಡು ಚಾಂಪಿಯನ್ ಆದರು.
`ಈ ಸಂತಸವನ್ನು ವರ್ಣಿಸಲು ಸಾಧ್ಯವಿಲ್ಲ. ಎಲ್ಲರಿಗೂ ಕೃತಜ್ಞತೆಗಳು~ ಎಂದು ಸೆರೆನಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. `ಸೆರೆನಾ ಉತ್ತಮ ಪ್ರದರ್ಶನ ನೀಡಿದರು. ಫೈನಲ್ ಪ್ರವೇಶಿಸಲು ಯಶಸ್ವಿಯಾದದ್ದು ನನಗೆ ಸಂತಸ ಉಂಟುಮಾಡಿದೆ~ ಎಂದು `ರನ್ನರ್ ಅಪ್~ ಪ್ರಶಸ್ತಿ ಪಡೆದ ರದ್ವಾಂಸ್ಕಾ ಹೇಳಿದರು.
ಸೆರೆನಾ ಸಾಧನೆಯ ನೋಟ...
-ಅಮೆರಿಕದ ಆಟಗಾರ್ತಿಗೆ ಒಲಿದ 14ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ
-ವಿಂಬಲ್ಡನ್ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್‌ಪಟ್ಟ
-ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಈ ಹಿಂದೆ 2002, 2003, 2009 ಮತ್ತು 2010 ರಲ್ಲಿ ಚಾಂಪಿಯನ್ ಆಗಿದ್ದರು
-ಸೆರೆನಾ ಆಸ್ಟ್ರೇಲಿಯಾ ಓಪನ್‌ನಲ್ಲಿ (2003, 2005, 2007, 2009, 2010) ಐದು, ಅಮೆರಿಕ ಓಪನ್‌ನಲ್ಲಿ (1999, 2002, 2008) ಮೂರು ಹಾಗೂ ಫ್ರೆಂಚ್ ಓಪನ್‌ನಲ್ಲಿ (2002) ಒಂದು ಸಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.