ADVERTISEMENT

ವಿರಾಟ್‌ ಬಳಗಕ್ಕೆ ಮತ್ತೊಂದು ಅವಕಾಶ

ಡೆಲ್ಲಿ ಡೇರ್‌ ಡೆವಿಲ್ಸ್ ತಂಡವನ್ನು ಮಣಿಸಿ ವಿಶ್ವಾಸದಲ್ಲಿರುವ ತಂಡಕ್ಕೆ ಕಿಂಗ್ಸ್ ಇಲೆವನ್‌ ಸವಾಲು

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಆರ್‌ಸಿಬಿ ಆಟಗಾರರು ಕಿಂಗ್ಸ್‌ ಇಲೆವನ್‌ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದಾರೆ
ಆರ್‌ಸಿಬಿ ಆಟಗಾರರು ಕಿಂಗ್ಸ್‌ ಇಲೆವನ್‌ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದಾರೆ   

ಇಂದೋರ್: ಗೆಲ್ಲಲೇಬೇಕಾದ ಮತ್ತೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸೋಮವಾರ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೆಣಸಲಿದೆ. ಮಾಡು ಇಲ್ಲ ಮಡಿ ಪಂದ್ಯದಲ್ಲಿ ಶನಿವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿದ ವಿರಾಟ್ ಕೊಹ್ಲಿ ಬಳಗ ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.

ಆರಂಭದಲ್ಲಿ ಉತ್ತಮ ಸಾಮರ್ಥ್ಯ ತೋರುತ್ತ ಬಂದಿರುವ ಕಿಂಗ್ಸ್ ಇಲೆವನ್ ಪಂಜಾಬ್‌ ಕಳೆದ ಎರಡು ಪಂದ್ಯಗಳಲ್ಲಿ ನಿರಂತರ ಸೋಲಿನ ಮೂಲಕ ನಿರಾಸೆ ಅನುಭವಿಸಿದೆ. ಹೀಗಾಗಿ ಸೋಮವಾರದ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್‌ ಹಂತದಲ್ಲಿ ಸ್ಥಾನ ಉಳಿಸಿಕೊಳ್ಳಲು ತಂಡ ಶ್ರಮಿಸಲಿದೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಆರ್‌ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಎದುರು ಐದು ವಿಕೆಟ್‌ಗಳ ಜಯ ಗಳಿಸಿತ್ತು. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದ್ದರು. ಕಿಂಗ್ಸ್ ಇಲೆವನ್‌ ಬೌಲರ್‌ಗಳು ಇವರಿಬ್ಬರನ್ನು ಹೇಗೆ ಎದುರಿಸುವರು ಎಂಬುದು ಕುತೂಹಲದ ವಿಷಯ. ಕಳೆದ ಪಂದ್ಯದಲ್ಲಿ ಈ ತಂಡದ ಬೌಲರ್‌ಗಳನ್ನು ದಂಡಿಸಿದ್ದ ಕೋಲ್ಕತ್ತ ನೈಟ್ ರೈಡರ್ಸ್ 245 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.

ADVERTISEMENT

ಎರಡೂ ತಂಡಗಳ ಬ್ಯಾಟಿಂಗ್ ವಿಭಾಗ ನಿರ್ದಿಷ್ಟ ಆಟಗಾರರನ್ನು ನೆಚ್ಚಿಕೊಂಡಿದೆ. ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್‌ ಅವರ ಮೇಲೆ ಅವಲಂಬಿಸಿದ್ದರೆ ಕಿಂಗ್ಸ್ ಇಲೆವನ್‌ ಕೆ.ಎಲ್‌.ರಾಹುಲ್ ಮತ್ತು ಕ್ರಿಸ್‌ ಗೇಲ್‌ ಅವರ ಬಲದಲ್ಲಿ ಸಾಧನೆ ಮಾಡುತ್ತ ಬಂದಿದೆ. ಆರ್‌ಸಿಬಿಯಲ್ಲಿ ಕೊಹ್ಲಿ ಮತ್ತು ಇತರ ಬ್ಯಾಟ್ಸ್‌ಮನ್‌ಗಳ ಸಾಮರ್ಥ್ಯದ ನಡುವೆ ಭಾರಿ ಅಂತರವಿದೆ. ಕೊಹ್ಲಿ 11 ಪಂದ್ಯಗಳಲ್ಲಿ ಒಟ್ಟು 466 ರನ್‌ ಗಳಿಸಿದ್ದಾರೆ. ಡಿವಿಲಿಯರ್ಸ್‌ ಒಂಬತ್ತು ಪಂದ್ಯಗಳಲ್ಲಿ 358 ರನ್‌ ಗಳಿಸಿದ್ದಾರೆ. ಆದರೆ ಮನದೀಪ್‌ ಸಿಂಗ್ (11 ‍ಪಂದ್ಯಗಳಿಂದ 245 ರನ್‌) ಸೇರಿದಂತೆ ಇತರ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ.

ಕಿಂಗ್ಸ್ ಇಲೆವನ್‌ನ ಪರ ರಾಹುಲ್‌ ಈ ವರೆಗೆ ಐದು ಅರ್ಧಶತಕ ಗಳಿಸಿದ್ದು 11 ಪಂದ್ಯಗಳಲ್ಲಿ 537 ರನ್ ಕಲೆ ಹಾಕಿದ್ದಾರೆ. ಗೇಲ್‌ ಎಂಟು ಪಂದ್ಯಗಳಲ್ಲಿ 332 ರನ್‌ ಗಳಿಸಿದ್ದಾರೆ. ಇವರಿಬ್ಬರು ಯಾವುದೇ ಎದುರಾಳಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್ ವಿಭಾಗದ ಚಿಂತೆ: ಉಭಯ ತಂಡಗಳ ಬೌಲಿಂಗ್ ವಿಭಾಗ ಸ್ಥಿರ ಸಾಮರ್ಥ್ಯ ತೋರಲು ಪ್ರಯತ್ನಿಸುತ್ತಿದೆ. ಕಿಂಗ್ಸ್‌ ತಂಡದ ಆ್ಯಂಡ್ರ್ಯೂ ಟೈ ಈ ವರೆಗೆ ಒಟ್ಟು 20 ವಿಕೆಟ್ ಕಬಳಿಸಿದ್ದು ಯುವ ಸ್ಪಿನ್ನರ್ ಮುಜೀಬ್‌ ಉರ್‌ ರಹಿಮಾನ್‌ 14 ವಿಕೆಟ್‌ಗಳೊಂದಿಗೆ ಮಿಂಚಿದ್ದಾರೆ. ಆದರೆ ನಾಯಕ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಈ ವರೆಗೆ ಗಮನ ಸೆಳೆಯಲು ಆಗಲಿಲ್ಲ. ಅವರು ಒಟ್ಟು 11 ಪಂದ್ಯಗಳಲ್ಲಿ ಉರುಳಿಸಿದ್ದು ಆರು ವಿಕೆಟ್ ಮಾತ್ರ. ಎಡಗೈ ಸ್ಪಿನ್ನರ್ ಅಕ್ಷರ್‌ ಪಟೇಲ್‌ ಕೂಡ ವೈಫಲ್ಯ ಕಂಡಿದ್ದಾರೆ. ಬರಿಂದರ್ ಸ್ರಾನ್‌ ಮತ್ತು ಮೋಹಿತ್ ಶರ್ಮಾ ಕೂಡ ಲಯ ಕಂಡುಕೊಳ್ಳಬೇಕಾಗಿದೆ.

ಆರ್‌ಸಿಬಿ ಪರ ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ (11 ಪಂದ್ಯಗಳಿಂದ 10 ವಿಕೆಟ್‌) ಮತ್ತು ವೇಗಿ ಉಮೇಶ್ ಯಾದವ್‌ (11 ಪಂದ್ಯಗಳಿಂದ 14 ವಿಕೆಟ್‌) ಪರಿಣಾಮ ಬೀರಿದ್ದು ಮೊಹಮ್ಮದ್ ಸಿರಾಜ್ ಕೆಲವು ಪಂದ್ಯಗಳಲ್ಲಿ ಮಾತ್ರ ಗಮನ ಸೆಳೆದಿದ್ದಾರೆ. ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಪವನ್ ನೇಗಿ ತಂಡಕ್ಕೆ ನಿರಾಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.