ADVERTISEMENT

ವಿವೇಕ್ಸ್, ಕ್ರೀಡಾ ಶಾಲೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 10:35 IST
Last Updated 29 ಡಿಸೆಂಬರ್ 2010, 10:35 IST

ಬೆಂಗಳೂರು: ವಿವೇಕ್ಸ್ ಮತ್ತು ವಿದ್ಯಾನಗರದ ಸರ್ಕಾರಿ ಕ್ರೀಡಾ ಶಾಲೆ ತಂಡಗಳು ಇಲ್ಲಿ ಕೊನೆಗೊಂಡ ಆರನೇ ರಾಘವೇಂದ್ರ ಸ್ಮಾರಕ (13 ವರ್ಷ ವಯಸ್ಸಿನೊಳಗಿನವರ) ಅಂತರ ಕ್ಲಬ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದವು. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ವಿವೇಕ್ಸ್ ತಂಡ 41-23 ರಲ್ಲಿ ಮೈಸೂರಿನ ಪ್ರೋಟೆಕ್ ತಂಡವನ್ನು ಮಣಿಸಿತು.

ವಿರಾಮದ ವೇಳೆಗೆ 21-16 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ನವೀನ್ (12) ಮತ್ತು ಚಿರಾಗ್ (8) ಅವರು ಉತ್ತಮ ಗುರಿ ಎಸೆತದ ಪ್ರದರ್ಶನ ನೀಡಿದರು. ಚೆಂಡನ್ನು ನಿಯಂತ್ರಿಸುವಲ್ಲಿ ಹಾಗೂ ಗುರಿ ಎಸೆತದಲ್ಲಿ ವಿವೇಕ್ಸ್ ತಂಡದವರು ಪ್ರಭಾವಿ ಎನಿಸಿದರು. ಚುರುಕಾಗಿ ಪಾಸ್ ನೀಡುತ್ತ ಮುನ್ನುಗ್ಗಿದ ರೀತಿಯೂ ಮೆಚ್ಚುವಂಥದು. ಎದುರಾಳಿ ತಂಡವು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ವಿವೇಕ್ಸ್ ತಂಡದ ಆಟಗಾರರು ಅವಕಾಶ ನೀಡಲಿಲ್ಲ. ಆದ್ದರಿಂದ ಪಂದ್ಯವು ಏಕಪಕ್ಷೀಯವಾಗಿ ಕೊನೆಗೊಂಡಿತು. ಪ್ರೋಟೆಕ್ ಪ್ರಬಲ ಪೈಪೋಟಿ ನೀಡಲೇ ಇಲ್ಲ.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕ್ರೀಡಾ ಶಾಲೆ ತಂಡ 28-18 ರಲ್ಲಿ ರಾಜ್‌ಮಹಲ್ ವಿರುದ್ಧ ಜಯ ಪಡೆಯಿತು. ಅಪೂರ್ವ (10) ಮತ್ತು ಎಂ.ಎಸ್. ಸುಪ್ರಿಯಾ (8) ಅವರು ಕ್ರೀಡಾ ಶಾಲೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇವಿ ಪ್ರಸಾದ್ (ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್) ಮತ್ತು ಎಂ.ಎಸ್. ಸುಪ್ರಿಯಾ (ಸರ್ಕಾರಿ ಕ್ರೀಡಾ ಶಾಲೆ) ಅವರು ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ‘ಬೆಸ್ಟ್ ಪ್ಲೇಯರ್’ ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.