ADVERTISEMENT

ವಿಶ್ವಕಪ್ ಆರ್ಚರಿ: ಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಕೋಲ್ಕತ್ತ (ಪಿಟಿಐ): ಭಾರತದ ಮಹಿಳಾ ತಂಡ ಕೊಲಂಬಿಯದ ಮೆಡೆಲಿನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-3' ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕ ಖಚಿತ ಪಡಿಸಿಕೊಂಡಿದೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬ್ಯಾಲ ದೇವಿ ಹಾಗೂ ರಿಮಿಲ್ ಬೈರುಲಿ ಅವರನ್ನೊಳಗೊಂಡ ಭಾರತದ ತಂಡ, ರಿಕರ್ವ್ ಸ್ಪರ್ಧೆಯಲ್ಲಿ ಶುಕ್ರವಾರ ಅಮೆರಿಕದ ಎದುರಾಳಿಗಳನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದೆ.

ಸೆಮಿಫೈನಲ್‌ನಲ್ಲಿ ಭಾರತದ ತಂಡ, ಮೊದಲ ಸೆಟ್‌ನಲ್ಲಿ 51-55ರಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಎರಡನೇ ಸುತ್ತಿನಲ್ಲಿ ಚೇತರಿಸಿಕೊಂಡು ಎದುರಾಳಿ ತಂಡ ನೀಡಿದ್ದ ನಾಲ್ಕು ಪಾಯಿಂಟ್ ಮುನ್ನಡೆ ತಗ್ಗಿಸಿಕೊಂಡಿದ್ದಲ್ಲದೆ ಸೆಟ್ ಅನ್ನು 106ರಲ್ಲಿ ಸಮಬಲ ಮಾಡಿಕೊಂಡಿತು. ಮೂರನೇ ಸೆಟ್‌ನಲ್ಲಿ ಉಭಯ ತಂಡಗಳು 162-162ರಲ್ಲಿ ಸಮಬಲ ಸಾಧಿಸಿ ನಾಲ್ಕನೇ ಹಾಗೂ ಅಂತಿಮ ಸುತ್ತಿನಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದವು.

ನಿರ್ಣಾಯಕ ಸುತ್ತಿನಲ್ಲಿ ಭಾರತ ತಂಡ 216-211ರಲ್ಲಿ ಅಮೆರಿಕ ವಿರುದ್ಧ ಜಯಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.