ADVERTISEMENT

ವಿಶ್ವಕಪ್ ಕ್ರೇಜ್ ಮೂಡಿಸಿಲ್ಲ...!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST
ವಿಶ್ವಕಪ್ ಕ್ರೇಜ್ ಮೂಡಿಸಿಲ್ಲ...!
ವಿಶ್ವಕಪ್ ಕ್ರೇಜ್ ಮೂಡಿಸಿಲ್ಲ...!   

ಬೆಂಗಳೂರು: ಯಾಕೊ ಗೊತ್ತಿಲ್ಲ ಜನರಿಗೆ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಅಷ್ಟಾಗಿ ಆಸಕ್ತಿ ಮೂಡಿಸಿಲ್ಲ. ಭಾರತದಲ್ಲಿಯೇ ಈ ದೊಡ್ಡ ಟೂರ್ನಿ ನಡೆಯುತ್ತಿದ್ದರೂ ಚೆಂಡು-ದಾಂಡಿನ ಆಟದ ಅಭಿಮಾನಿಗಳು ಸಂಭ್ರಮವನ್ನು ಅಬ್ಬರದೊಂದಿಗೆ ವ್ಯಕ್ತಪಡಿಸಿಲ್ಲ...!
ಅದಕ್ಕೇ ಅನೇಕ ಕಡೆಯಲ್ಲಿ ನಾಲ್ಕಾರು ಜನರು ಸೇರಿ ವಿಶ್ವಕಪ್ ವಿಷಯವಾಗಿ ಚರ್ಚೆ ಮಾಡುವಾಗ ಒಂದೇ ಮಾತು ಕೇಳಿಬರುತ್ತಿದೆ.
 

‘ಈ ವಿಶ್ವಕಪ್ ಅಷ್ಟೇನು ಕ್ರೇಜ್ ಮೂಡಿಸಿಲ್ಲ’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಆಗಿದ್ದೇಕೆ? ಎಂದು ಯೋಚಿಸಿದಾಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಪ್ರಾಯೋಜಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಟ್ಟಿರುವ ಚೌಕಟ್ಟು ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ.
 

ಐಸಿಸಿ ಹೆಚ್ಚು ಹೆಚ್ಚು ಲಾಭ ಎನ್ನುವ ಧ್ಯಾನದಲ್ಲಿ ಸಾಮಾನ್ಯ ಜನರ ಕ್ರಿಕೆಟ್ ಪ್ರೀತಿಗೂ ಧಕ್ಕೆ ತರುತ್ತಿದೆ. ಬೀದಿ ಬದಿಯ ಟೆಲಿವಿಷನ್ ಅಂಗಡಿಯ ಮುಂದೆ ಬಹಿರಂಗವಾಗಿ ಬೀದಿಗೆ ಮುಖಮಾಡಿ ಇಟ್ಟಂಥ ಟಿವಿ ಸೆಟ್‌ನಲ್ಲಿ ಮೂಡಿಬರುತ್ತಿದ್ದ ಪಂದ್ಯವನ್ನು ನಾಲ್ಕು ವರ್ಷಗಳ ಹಿಂದೆ ಜನರು ಗುಂಪುಗೂಡಿ ನೋಡುತ್ತಿದ್ದರು.
 

ADVERTISEMENT

ಆದರೆ ಈಗ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ಹೀಗೆ ಬಹಿರಂಗವಾಗಿ ಟಿವಿ ಸೆಟ್ ಇಟ್ಟು ಪ್ರದರ್ಶಿಸಲು ಅವಕಾಶ ಇಲ್ಲ. ಕಾರಣ ಸಾರ್ವಜನಿಕ ಪ್ರಸಾರದ ಹಕ್ಕನ್ನು ಕೂಡ ಐಸಿಸಿ ಮಾರಾಟ ಮಾಡಿದೆ. ಹೀಗೆ ಜನರು ತಮ್ಮ ನಿತ್ಯ ಕೆಲಸದ ನಡುವೆ ಅಲ್ಲಿ ಇಲ್ಲಿ ಅಂಗಡಿಗಳಲ್ಲಿ ಇಟ್ಟ ಟಿವಿಯತ್ತ ಕಣ್ಣು ಹರಿಸಿ ಆಟವನ್ನು ನೋಡುತ್ತಿದ್ದ ಸಂತೋಷವನ್ನು ಕ್ರಿಕೆಟ್ ಮಂಡಳಿಯೇ ಕಿತ್ತುಕೊಂಡಿದೆ. ಇದೊಂದು ನಿದರ್ಶನ ಮಾತ್ರ.

ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಆಡಳಿತವನ್ನು ನೋಡಿಕೊಳ್ಳುವ ಐಸಿಸಿ ತನ್ನ ಲಾಭಕ್ಕಾಗಿ ಹಾಕಿರುವ ಕಡಿವಾಣದ ಪರಿಣಾಮವಾಗಿ ಕ್ರಿಕೆಟ್ ಪ್ರೀತಿಯೇ ಬಂಧನದಲ್ಲಿ ಸಿಲುಕಿದೆ. ಕ್ರೀಡಾಂಗಣಕ್ಕೆ ಹೋಗಿ ಆಟವನ್ನು ನೋಡಲು ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಕ್ರೀಡಾಂಗಣದ ಹೊರಗೆ ಈ ಆಟದ ಬಗ್ಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಲು ಕೂಡ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ.
 

 ವಿಶ್ವಕಪ್ ಕ್ರಿಕೆಟ್ ಎನ್ನುವುದು ಅಧಿಕೃತ ಪ್ರಾಯೋಜಕರ ಸ್ವತ್ತು ಎನ್ನುವಂತ ಸ್ಥಿತಿಯನ್ನು ನಿರ್ಮಿಸಲಾಗಿದೆ. ಇಂಥ ವಾತಾವರಣದ ನಡುವೆ ಆಟದ ಮೇಲಿನ ಪ್ರೇಮವನ್ನು ಮನಬಿಚ್ಚಿ ವ್ಯಕ್ತಪಡಿಸುವುದೇ ಕಷ್ಟವಾಗಿದೆ.ಟಿ-ಶರ್ಟ್ ಮೇಲೆ ವಿಶ್ವಕಪ್ ಚಿಹ್ನೆ ಬರೆದುಕೊಂಡು ಧರಿಸುವುದಕ್ಕೂ ಕಡಿವಾಣ. ಚಿಹ್ನೆಯನ್ನು ಎದೆಯ ಮೇಲೆ ಧರಿಸುವುದಾದರೆ ಸ್ಮರಣಿಕೆಗಳನ್ನು ವಿತರಿಸುವ ಹಕ್ಕು ಹೊಂದಿರುವ ಅಧಿಕೃತ ಮಾರಾಟಗಾರರಿಂದ ಟಿ-ಶರ್ಟ್ ಕೊಳ್ಳಬೇಕು.
 

ಆದರೆ ಆ ಟಿ-ಶರ್ಟ್‌ಗಳ ಬೆಲೆ ಕೇಳಿದರೆ ಸಾಮಾನ್ಯ ಜನರಿಗೆ ತಲೆ ಸುತ್ತಿ ಬರುವುದಂತೂ ಖಚಿತ. ಅಧಿಕೃತ ಲಾಂಛನ ‘ಸ್ಟಂಪಿ’ ಕೊಳ್ಳಬೇಕೆಂದರೆ ಅದಕ್ಕೂ ಇದೇ ನಿಯಮ ಅನ್ವಯ. ಚೀನಾದ ಆಟಿಕೆ ಸಾಮಗ್ರಿಗಳ ಉತ್ಪಾದನಾ ಕಂಪೆನಿಯು ಹಕ್ಕು ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಈ ಸ್ಟಂಪಿಗಳ ಗುಣಮಟ್ಟ ಮತ್ತು ಬೆಲೆಗೆ ಹೋಲಿಕೆ ಮಾಡಿ ತೂಗಿ ನೋಡಿದರೆ ಬೇಸರ ಆಗುವುದಂತೂ ಸಹಜ.

ವಿಶ್ವಕಪ್ ಟ್ರೋಫಿಯ ಪ್ರತಿರೂಪಗಳು ಕೈಗೆತ್ತಿಕೊಂಡರೆ ಕಿತ್ತು ಬರುವಂಥವು. ಭಾರಿ ಮೊತ್ತಕ್ಕೆ ಕೊಂಡುಕೊಂಡು ಕ್ರಿಕೆಟ್ ಪ್ರೀತಿ ವ್ಯಕ್ತಪಡಿಸಲು ಜೇಬಂತೂ ಭದ್ರವಾಗಿರಬೇಕು!ಹಲವಾರು ರೀತಿಯಲ್ಲಿ ವಿಶ್ವಕಪ್ ಕ್ರಿಕೆಟ್ ಆಟವನ್ನು ಬಳಸಿಕೊಂಡು ಜನರಲ್ಲಿ ವಿವಿಧ ರೀತಿಯಲ್ಲಿ ಆಸಕ್ತಿ ಮೂಡಿಸಿ, ತಾವೂ ಒಂದಿಷ್ಟು ಲಾಭ ಮಾಡಿಕೊಳ್ಳುತ್ತಿದ್ದ ಸಣ್ಣಪುಟ್ಟ ಕಂಪೆನಿಗಳೂ ಈ ಬಾರಿ ತಣ್ಣಗಾಗಿವೆ.
 

 ಏಕೆಂದರೆ ಐಸಿಸಿ ವಿಶ್ವಕಪ್ ಅನ್ನು ಅಧಿಕೃತ ಪ್ರಾಯೋಜಕರು ಮಾತ್ರ ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂದು ಕಟ್ಟು ನಿಟ್ಟಿನಿಂದ ಹೇಳಿದೆ. ಆದ್ದರಿಂದ ಜನರಿಗೆ ಇಷ್ಟವಾಗುವ ಈ ಆಟದ ಮೂಲಕ ಹುರುಪು ಹೆಚ್ಚಿಸುತ್ತಿದ್ದವರೂ ಕ್ರಿಕೆಟ್ ಸಹವಾಸವೇ ಬೇಡವೆಂದು ತಣ್ಣಗಾಗಿದ್ದಾರೆ.

ಕ್ಲಬ್‌ಗಳಂಥ ಕಡೆಯಲ್ಲಿ ಆಟದ ನೇರ ಪ್ರಸಾರವನ್ನು ದೊಡ್ಡ ತೆರೆಯ ಮೇಲೆ ಪ್ರಸಾರ ಮಾಡಲು ‘ಬಹಿರಂಗ ಪ್ರಸಾರದ ಹಕ್ಕು’ ಪಡೆದವರಿಗೆ ದುಬಾರಿ ಶುಲ್ಕ ನೀಡಬೇಕು. ಇದರಿಂದಾಗಿ ಬೃಹತ್ ಪರದೆಯಲ್ಲಿ ಕ್ರಿಕೆಟ್ ತೋರಿಸುವ ಆಸಕ್ತಿಯನ್ನು ಬೆಂಗಳೂರಿನಲ್ಲಿರುವ ಹೆಚ್ಚಿನ ಕ್ಲಬ್‌ಗಳು ತೋರಿಸಿಲ್ಲ.

ಇದೆಲ್ಲದರ ಪರಿಣಾಮವಾಗಿ ವಿಶ್ವಕಪ್ ನಡೆದಿರುವ ಈ ಕಾಲದಲ್ಲಿಯೂ ಹುಮ್ಮಸ್ಸಿನ ವಾತಾವರಣವಿಲ್ಲ. ದೊಡ್ಡದೊಂದು ಕ್ರಿಕೆಟ್ ಹಬ್ಬದಲ್ಲಿ ಭಾರತ ಕೂಡ ಆತಿಥೇಯ ದೇಶವಾಗಿ ಪಾಲ್ಗೊಂಡಿದ್ದರೂ, ಸಂಭ್ರಮ ಮಾತ್ರ ಮಾಯ. ‘ಯಾಕೊ ಈ ಬಾರಿ ವಿಶ್ವಕಪ್ ಕ್ರೇಜ್ ಇಲ್ಲ’ ಎಂದು ಎಲ್ಲರೂ ಮಾತನಾಡುವಂತಾಗಿದೆ. ಮೋಸದಾಟ, ಸ್ಪಾಟ್‌ಫಿಕ್ಸಿಂಗ್, ಬೆಟ್ಟಿಂಗ್ ನಡುವೆ ಸಿಲುಕಿ ತೊಳಲಾಡಿ ಹೊರಬಂದ ಕ್ರಿಕೆಟ್ ಆಟವನ್ನು ಜನರು ಅನುಮಾನದಿಂದ ನೋಡುತ್ತಿದ್ದಾರೆ.
 

ಅದರ ಜೊತೆಗೆ ಐಸಿಸಿ ತನ್ನ ಅಧಿಕೃತ ಪ್ರಾಯೋಜಕರ ಹಿತ ಕಾಪಾಡುವ ಆತುರದಲ್ಲಿ ಹಲವಾರು ರೀತಿಯಲ್ಲಿ ಕಡಿವಾಣ ಹಾಕುವ ಮೂಲಕ ವಿಶ್ವಕಪ್ ಸೊರಗಿ ಹೋಗುವಂತೆ ಮಾಡಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.