ADVERTISEMENT

ವಿಶ್ವಾಸ ಹೆಚ್ಚಿಸುವ ಜಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ವಿಶ್ವಾಸ ಹೆಚ್ಚಿಸುವ ಜಯದ ನಿರೀಕ್ಷೆ
ವಿಶ್ವಾಸ ಹೆಚ್ಚಿಸುವ ಜಯದ ನಿರೀಕ್ಷೆ   

ಮುಂಬೈ: ನಾಕ್‌ಔಟ್ ಹಂತದಲ್ಲಿ ಹೋರಾಡಲು ವಿಶ್ವಾಸದೊಂದಿಗೆ ಸಜ್ಜಾಗುವ ನಿಟ್ಟಿನಲ್ಲಿ ವಿಶ್ವಕಪ್ ಕ್ರಿಕೆಟ್ ‘ಎ’ ಗುಂಪಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡದವರು ಬಯಸಿರುವುದು ಸಹಜ.ಉಭಯ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಯಾಗಿದೆ. ‘ಎ’ ಗುಂಪಿನಲ್ಲಿ ಸದ್ಯ ಮೊದಲ ನಾಲ್ಕು ಸ್ಥಾನದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿವೆ. ಆದ್ದರಿಂದ ಈ ಗುಂಪಿನಲ್ಲಿ ಕೊನೆಯ ಹಂತದಲ್ಲಿ ಲೆಕ್ಕಾಚಾರ ಮಾಡಬೇಕಾದ ಪರಿಸ್ಥಿತಿಯಂತೂ ಇಲ್ಲ. ಜಿಂಬಾಬ್ವೆ, ಕೆನಡಾ ಹಾಗೂ ಕೀನ್ಯಾ ತಂಡದವರು ಲೀಗ್ ಪಟ್ಟಿಯಲ್ಲಿ ಕೊನೆಯಲ್ಲಿ ಇದ್ದು, ಮೇಲಿರುವ ಪ್ರಬಲ ತಂಡಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿಲ್ಲ.

ಮೇಲಿರುವ ನಾಲ್ಕು ತಂಡಗಳು ಮಾತ್ರ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡು ಎಂಟರ ಘಟ್ಟದ ಹೋರಾಟಕ್ಕೆ ಸಜ್ಜಾಗಬೇಕು. ಸಿಂಹಳೀಯರು ಹಾಗೂ ಕಿವೀಸ್ ಪಡೆಯವರು ಇನ್ನಷ್ಟು ಎತ್ತರಕ್ಕೆ ಏರುವ ಕನಸು ಕಂಡಿದ್ದಾರೆ. ಸದ್ಯ ಎಂಟು ಪಾಯಿಂಟುಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ವಿಜಯ ಸಾಧಿಸಿದಲ್ಲಿ ಎರಡನೇ ಸ್ಥಾನದಲ್ಲಿ ಗಟ್ಟಿಯಾಗುತ್ತದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಅಲ್ಲಿಯೇ ಗಟ್ಟಿಯಾಗಿ ಉಳಿಯಲು ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ. ಲಂಕಾ ಮಾತ್ರ ನಾಲ್ಕನೇ ಸ್ಥಾನದಿಂದ ಮೇಲೇರುವ ಆಶಯ ಹೊಂದಿದೆ.

ಡೇನಿಯಲ್ ವೆಟೋರಿ ಅನುಪಸ್ಥಿತಿಯಲ್ಲಿ ರಾಸ್ ಟೇಲರ್ ನಾಯಕತ್ವದಲ್ಲಿ ಆಡಲಿರುವ ಕಿವೀಸ್ ತಂಡವನ್ನು ಮಣಿಸಿದಲ್ಲಿ ಸಿಂಹಳೀಯರ ಸ್ಥಾನದಲ್ಲಿ ಬದಲಾವಣೆ ಆಗುತ್ತದೆ. ಹಾಗೆ ಆಗಬೇಕು ಎನ್ನುವುದೇ ನಾಯಕ ಕುಮಾರ ಸಂಗಕ್ಕಾರ ಅವರ ಬಲವಾದ ಬಯಕೆ.

ನ್ಯೂಜಿಲೆಂಡ್ ತಂಡವು ಈಗ ಕೆಲವು ಸಮಸ್ಯೆಗಳನ್ನು ಎದುರಿಸಿದೆ. ಗಾಯದ ಕಾರಣ ಡೇನಿಯಲ್ ವೆಟೋರಿ ಹಾಗೂ ವೇಗಿ ಕೇಲ್ ಮಿಲ್ಸ್ ಅವರು ವಿಶ್ರಾಂತಿ ಪಡೆದಿದ್ದಾರೆ. ಆದ್ದರಿಂದ ಉಪ ನಾಯಕ ಟೇಲರ್ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ‘ಡೇನಿಯಲ್ ಮತ್ತು ಕೇಲ್ ಅವರು ಕ್ವಾರ್ಟರ್ ಫೈನಲ್ ಹೊತ್ತಿಗೆ ತಂಡದ ನೆರವಿಗೆ ಹಿಂದಿರುಗಬಹುದು’ ಎಂದು ರಾಸ್ ಹೇಳಿದ್ದಾರೆ.

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರೂ ನ್ಯೂಜಿಲೆಂಡ್‌ಗೆ ಆತಂಕವಿಲ್ಲ. ಕ್ವಾರ್ಟರ್ ಫೈನಲ್‌ನಲ್ಲಿ ಆಡುವುದು ಖಚಿತವಾಗಿದೆ. ಶ್ರೀಲಂಕಾ ಕೂಡ ಅಷ್ಟೇ ನಿರಮ್ಮಳವಾಗಿದೆ. ಆದರೂ ಅದು ತನ್ನ ಖಾತೆಯಲ್ಲಿನ ಪಾಯಿಂಟುಗಳನ್ನು ಹೆಚ್ಚಿಸಿಕೊಂಡು ಭಾರಿ ಹುಮ್ಮಸ್ಸಿನೊಂದಿಗೆ ನಾಕ್‌ಔಟ್‌ಗೆ ಪ್ರವೇಶ ಪಡೆಯಬೇಕು. ಆದ್ದರಿಂದ ಕೊನೆಯ ಲೀಗ್ ಪಂದ್ಯವನ್ನು ಕೂಡ ಬಹಳಷ್ಟು ಗಂಭೀರವಾಗಿ ಪರಿಗಣಿಸಿ ಹೋರಾಡಲು ಯೋಜನೆ ರೂಪಿಸಿಕೊಂಡಿದೆ.

ವೆಟೋರಿ ಮತ್ತು ಮಿಲ್ಸ್ ಇಲ್ಲದಿರುವುದು ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಪ್ರಯೋಜನಕಾರಿ ಎನ್ನುವ ಅಭಿಪ್ರಾಯವನ್ನು ಲಂಕಾ ತಂಡದ ಅನುಭವಿ ಬ್ಯಾಟ್ಸ್‌ಮನ್ ಮಾಹೇಲ ಜಯವರ್ಧನೆ ವ್ಯಕ್ತಪಡಿಸಿದ್ದಾರೆ. ‘ಅವರಿಬ್ಬರೇ ಹೆಚ್ಚು ಅಪಾಯಕಾರಿ. ಅಂಥ ಅನುಭವಿ ಬೌಲರ್‌ಗಳು ಇಲ್ಲದಿರುವ ಕಾರಣ ನ್ಯೂಜಿಲೆಂಡ್ ಪ್ರಬಲ ಸವಾಲಾಗಿ ನಿಲ್ಲುವ ತಂಡವಾಗಿ ಕಾಣಿಸುವುದಿಲ್ಲ’ ಎಂದು ಪಂದ್ಯದ ಮುನ್ನಾದಿನವಾದ ಗುರುವಾರ ಮಾಹೇಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.