ಮಾಸ್ಕೊ: ನವದೆಹಲಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಕರ್ನಾಟಕದ ವಿಕಾಸ್ ಗೌಡ 14ನೇ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಸತತ ಎರಡನೇ ಸಲ ಫೈನಲ್ ಪ್ರವೇಶಿಸಿದ್ದಾರೆ.
ಲುಜ್ನಿಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದರು. ಹೋದ ಸಲ ದೇಗುವಿನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ 63.64 ಮೀಟರ್ಸ್ ದೂರ ಡಿಸ್ಕ್ ಎಸೆದು ಮೈಸೂರಿನ ವಿಕಾಸ್ ಏಳನೇ ಸ್ಥಾನ ಪಡೆದಿದ್ದರು.
ಇಲ್ಲಿ 30 ವರ್ಷದ ವಿಕಾಸ್ ಮೊದಲ ಪ್ರಯತ್ನದಲ್ಲಿ 63.64 ಮೀಟರ್ಸ್ ದೂರ ಡಿಸ್ಕ್ ಎಸೆದರು. ನಂತರ ಕ್ರಮವಾಗಿ 62.59ಮೀ. ಮತ್ತು 62.67ಮೀ. ದೂರ ಎಸೆಯಲಷ್ಟೇ ಶಕ್ತರಾದರು. ಭಾರತದ ಅಥ್ಲೀಟ್ ತಮ್ಮ ಗುಂಪಿನಲ್ಲಿ ನಾಲ್ಕನೇ ಸ್ಥಾನ ಹಾಗೂ ಒಟ್ಟಾರೆಯಾಗಿ ಏಳನೇ ಸ್ಥಾನ ಪಡೆದುಕೊಂಡರು. ಮೊದಲ 12 ಸ್ಥಾನಗಳನ್ನು ಪಡೆದ ಸ್ಪರ್ಧಿಗಳು ಫೈನಲ್ ಪ್ರವೇಶಿಸಲು ಅರ್ಹತೆ ಪಡೆಯುತ್ತಾರೆ.
ಒಲಿಂಪಿಕ್ ಚಾಂಪಿಯನ್ ಹಾಗೂ ಹೋದ ಸಲದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಬಾಚಿಕೊಂಡಿದ್ದ ಜರ್ಮನಿಯ ರೋಬೆರ್ಟ್ ಹರ್ಟಿಂಗ್ 66.62ಮೀಟರ್ಸ್ ದೂರ ಡಿಸ್ಕ್ ಎಸೆದು ಅರ್ಹತಾ ಸುತ್ತಿನಲ್ಲಿ ಒಟ್ಟಾರೆಯಾಗಿ ಅಗ್ರಸ್ಥಾನ ಗಳಿಸಿದ್ದಾರೆ. ಫೈನಲ್ ಸ್ಪರ್ಧೆಗಳು ಮಂಗಳವಾರ ಬೆಳಿಗ್ಗೆ 8.30 (ಭಾರತೀಯ ಕಾಲಮಾನ) ನಡೆಯಲಿವೆ.
`ನನ್ನ ಪ್ರದರ್ಶನ ಖುಷಿ ನೀಡಿದೆ. ಮೊದಲ ಪ್ರಯತ್ನದಲ್ಲಿ ತೋರಿದ ಸಾಮರ್ಥ್ಯದಿಂದ ಸಮಾಧಾನವಾಯಿತು. ಆದರೆ, ಎರಡು ಮತ್ತು ಮೂರನೇ ಪ್ರಯತ್ನದಲ್ಲಿ ಎಸೆದ ದೂರ ತೃಪ್ತಿ ನೀಡಲಿಲ್ಲ. ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ' ಎಂದು ವಿಕಾಸ್ ಹೇಳಿದರು.
ಭಾನುವಾರ ರಾತ್ರಿ ಇಲ್ಲಿ ಮಳೆ ಸುರಿಯಿತು. ವಾತಾವರಣದಲ್ಲಿಯೂ ಬದಲಾವಣೆಯಾಯಿತು. ಇದು ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಿತೇ ಎನ್ನುವ ಪ್ರಶ್ನೆಗೆ `ವಾತಾವರಣದ ಸಮಸ್ಯೆಯಲ್ಲ. ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಮೇಲೆ ನನ್ನ ವಿಶ್ವಾಸ ಹೆಚ್ಚಾಗಿದೆ' ಎಂದು ವಿಕಾಸ್ ನುಡಿದರು.
ಫೈನಲ್‌ಗೆ ಪ್ರೈಸ್: ಮಹಿಳೆಯರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಜಮೈಕಾದ ಶೆಲ್ಲೆ ಅನ್ನಾ ಫ್ರೆಸರ್ ಪ್ರೈಸ್ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪದಕ ಗೆಲ್ಲುವ ಅವಕಾಶ ಲಭಿಸಿದೆ.
ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿರುವ 27 ವರ್ಷದ ಜಮೈಕಾದ ಅಥ್ಲೀಟ್ 10.85ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಅಥ್ಲೀಟ್ ಹೋದ ವರ್ಷ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ 200ಮೀಟರ್ಸ್ ಮತ್ತು 4ಷ100ಮೀಟರ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಮೂರನೇ ಹೀಟ್ಸ್‌ನಲ್ಲಿ ಇವರು ಅಗ್ರಸ್ಥಾನ ಗಳಿಸಿದರು.
ಪ್ರತಿ ಹೀಟ್ಸ್‌ನಲ್ಲಿ ಎಂಟು ಅಥ್ಲೀಟ್‌ಗಳು ಇರುತ್ತಾರೆ. ಮೊದಲ ಹೀಟ್ಸ್‌ನಿಂದ ಇಬ್ಬರು, ಎರಡು ಮತ್ತು ಮೂರನೇ ಹೀಟ್ಸ್‌ನಿಂದ ತಲಾ ಮೂವರು ಅಥ್ಲೀಟ್‌ಗಳು ಫೈನಲ್ ಪ್ರವೇಶಿಸಲಿದ್ದಾರೆ.
ಮೊದಲ ಹೀಟ್ಸ್‌ನಲ್ಲಿ ನೈಜೇರಿಯಾದ ಬ್ಲೆಸ್ಸಿಂಗ್ ಒಕಬಾರೆ ಮತ್ತು ಅಮೆರಿಕದ ಓಕ್ಟವಿಯಸ್ ಫ್ರಿಮನ್ 11.08ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಫೈನಲ್ ಪ್ರವೇಶಿಸಿದರು.
ಎರಡನೇ ಹೀಟ್ಸ್‌ನಲ್ಲಿ ಅಮೆರಿಕದ ಕಾರ್ಮೆಲಿಟಾ ಜೆಟರ್ (ಕಾಲ: 10.95ಸೆ.), ಮುರಿಯೆಲಾ ಅಹೊರೆ (ಕಾಲ: 10.95ಸೆ.) ಮತ್ತು ಅಮೆರಿಕದ ಇಂಗ್ಲಿಷ್ ಗಾರ್ಡಿನೆರ್ (ಕಾಲ: 11.00ಸೆ.) ಅಂತಿಮ ಘಟ್ಟ ತಲುಪಿದರು. ಮೂರನೇ ಹೀಟ್ಸ್‌ನಲ್ಲಿ ಜಮೈಕಾದ ಕೆರೊನ್ ಸ್ಟುವರ್ಟ್ 10.97ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರೆ, ಅಮೆರಿಕದ ಅಲೆಕ್ಸಾಂಡ್ರಿಯಾ ಆ್ಯಂಡರ್ಸನ್ 11.01ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಫೈನಲ್‌ಗೆ ಲಗ್ಗೆ ಇಟ್ಟರು.
ಮಂಗಳವಾರದ ಸ್ಪರ್ಧೆಗಳು
ಮಹಿಳಾ ವಿಭಾಗ
* 20 ಕಿ.ಮೀ. ನಡಿಗೆ (ಬೆಳಿಗ್ಗೆ 11.05)
* ಪೋಲ್ ವಾಲ್ಟ್ (ರಾತ್ರಿ 9.05)
* ಹೆಪ್ಟಥ್ಲಾನ್ 800 ಮೀ. (ರಾತ್ರಿ 9.40)
* ಸ್ಟೀಪಲ್ ಚೇಸ್ (ರಾತ್ರಿ 10.55)
ಪುರುಷರ ವಿಭಾಗ
* ಡಿಸ್ಕಸ್ ಎಸೆತ (ರಾತ್ರಿ 8.30)
* 800ಮೀ. (ರಾತ್ರಿ 10.40)
* 400ಮೀ. (ರಾತ್ರಿ 11.20)
(ಭಾರತೀಯ ಕಾಲಮಾನದ ಪ್ರಕಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.