ADVERTISEMENT

ವಿಶ್ವ ಅಥ್ಲೆಟಿಕ್ಸ್: ವಿಕಾಸ್ ನಿರಾಸೆ

ಏಳನೇ ಸ್ಥಾನಕ್ಕಿಳಿದ ಕನ್ನಡಿಗ

ಕೆ.ರಾಜೀವ
Published 13 ಆಗಸ್ಟ್ 2013, 20:00 IST
Last Updated 13 ಆಗಸ್ಟ್ 2013, 20:00 IST

ಮಾಸ್ಕೊ : ಭಾರತದ ವಿಕಾಸ್ ಗೌಡ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿ ಯನ್‌ಷಿಪ್‌ನಲ್ಲಿ ಮತ್ತೆ ನಿರಾಸೆಗೊಂಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಹದಿನಾಲ್ಕನೇ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಮಂಗಳವಾರ ಮೈಸೂರಿನ ವಿಕಾಸ್ ಗೌಡ ಡಿಸ್ಕಸ್ ಎಸೆತದಲ್ಲಿ 64.03 ಮೀಟರ್ಸ್ ದೂರವಷ್ಟೇ ಎಸೆಯಲು ಶಕ್ತರಾಗಿ ಏಳನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ತಿಂಗಳ ಹಿಂದೆ ಪುಣೆಯಲ್ಲಿ ನಡೆದಿದ್ದ ಏಷ್ಯಾ  ಅಥ್ಲೆಟಿಕ್ಸ್‌ನಲ್ಲಿ 64.90 ಮೀಟರ್ಸ್ ದೂರ ಎಸೆದು ಚಿನ್ನದ ಸಾಮರ್ಥ್ಯ ತೋರಿದ್ದ ಇವರು ಇಲ್ಲಿ ಆ ಮಟ್ಟವನ್ನೂ ತಲುಪಲಾಗಲಿಲ್ಲ.

ಮೊದಲ ಯತ್ನದಲ್ಲಿ 63.41 ಮೀಟರ್ಸ್ ಸಾಮರ್ಥ್ಯ ತೋರಿದ ವಿಕಾಸ್, ಎರಡನೇ ಯತ್ನದಲ್ಲಿ ಫೌಲ್ ಎಸಗಿದರು. ನಂತರ ಕ್ರಮವಾಗಿ 62.20ಮೀ., 64.03ಮೀ., 63.67ಮೀ., 63.64 ಮೀ. ದೂರ ಡಿಸ್ಕ್ ಎಸೆದರು. ಇವರು ಎರಡು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ದೇಗುನಲ್ಲಿ ನಡೆದಿದ್ದ ವಿಶ್ವ      ಅಥ್ಲೆಟಿಕ್ಸ್‌ನಲ್ಲಿಯೂ 64.05 ಮೀಟರ್ಸ್‌ನ ಸಾಮರ್ಥ್ಯದೊಂದಿಗೆ ಏಳನೇ ಸ್ಥಾನ ಪಡೆದಿದ್ದರು.

ಕಳೆದ ವರ್ಷ ಲಂಡನ್      ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಜರ್ಮನಿಯ ರಾಬರ್ಟ್ ಹಾರ್ಟಿಂಗ್ ಇಲ್ಲಿ 69.11ಮೀಟರ್ಸ್ ದೂರ ಡಿಸ್ಕ್ ಎಸೆದು ಮೊದಲ ಸ್ಥಾನ ಪಡೆದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಇವರು ಗೆದ್ದ ಮೂರನೇ ಚಿನ್ನದ ಪದಕವಾಗಿದೆ. ಪೋಲೆಂಡ್‌ನ ಪ್ಯೋಟರ್ ಮಲಾಚೌವ್‌ಸ್ಕಿ ಅವರು 68.36ಮೀಟರ್ಸ್ ದೂರ ಡಿಸ್ಕ್ ಎಸೆದು ರಜತ ಪದಕ ಗಳಿಸಿದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಎಸ್ತೊನಿಯಾದ ಗರ್ಡ್ ಕ್ಯಾಂಟರ್ 65.19 ಮೀಟರ್ಸ್‌ನ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದರು.

ಬೆಳಿಗ್ಗೆ ನಡೆದ ಮಹಿಳಾ ವಿಭಾಗದ 20 ಕಿಲೋ ಮೀಟರ್ಸ್ ನಡಿಗೆ ಸ್ಪರ್ಧೆಯಲ್ಲಿ ಭಾರತದ ಖುಷ್‌ಬೀರ್ ಕೌರ್ ಅವರು 39ನೇಯವರಾಗಿ ಗುರಿ ತಲುಪಿದರಾದರೂ, ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆ (1ಗಂ.37ನಿ.28ಸೆ.)ಯನ್ನು ಇಲ್ಲಿ ಉತ್ತಮ (1ಗಂ.34ನಿ.28ಸೆ.) ಪಡಿಸಿದರು.

62 ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಪೈಪೋಟಿಯಲ್ಲಿ ಲಂಡನ್      ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ  ರಷ್ಯಾದ ಎಲೆನಾ ಲಷ್ಮನೊವಾ ಅವರು ಮೊದಲಿಗರಾಗಿ (1ಗಂ.27ನಿ.08ಸೆ.) ಗುರಿ ಮುಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.