ADVERTISEMENT

ವೀಸಾ ವಿವಾದ: ವೂಲ್ವ್ಸ್‌ ತಂಡ ನಿರಾಳ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಮೊಹಾಲಿ (ಪಿಟಿಐ): ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಫೈಸಲಾಬಾದ್‌ ವೂಲ್ವ್ಸ್‌ ತಂಡದ ಆಟಗಾರರಿಗೆ ಚಂಡೀಗಡದ ಹೋಟೆಲ್‌ನಲ್ಲಿ ತಂಗಲು ಅವಕಾಶ ಲಭಿಸಿದೆ. ಈ ಕಾರಣ ತಂಡದ ಸದಸ್ಯರು ನಿಟ್ಟುಸಿರುಬಿಟ್ಟಿದ್ದಾರೆ.

ಮಿಸ್ಬಾ ಉಲ್‌ ಹಕ್‌ ನೇತೃತ್ವದ ಪಾಕಿಸ್ತಾನದ ತಂಡ ಭಾನುವಾರ ಇಲ್ಲಿಗೆ ಆಗಮಿಸಿತ್ತಲ್ಲದೆ, ಆಟಗಾರರು ನೇರವಾಗಿ ಚಂಡೀಗಡದ ಹೋಟೆಲ್‌ಗೆ ತೆರಳಿದ್ದರು. ಆದರೆ ಆಟಗಾರಿಗೆ ನೀಡಿದ್ದ ವೀಸಾದಂತೆ ಮೊಹಾಲಿಯಲ್ಲಿ ಮಾತ್ರ ತಂಗಲು ಅವಕಾಶವಿತ್ತು. ಈ ಕಾರಣ ತಂಡಕ್ಕೆ  ಮೊಹಾಲಿಗೆ ತೆರಳುವಂತೆ ಸೂಚಿಸಲಾಗಿತ್ತು. ಆಟಗಾರರು ಒಂದು ರಾತ್ರಿಯನ್ನು ಮೊಹಾಲಿಯಲ್ಲಿರುವ ಪಿಸಿಎ ಕ್ರೀಡಾಂಗಣದ ಕ್ಲಬ್‌ಹೌಸ್‌ನಲ್ಲಿ ಕಳೆದಿದ್ದರು.

ಇದೀಗ ಬಿಸಿಸಿಐ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿದೆ. ‘ವೂಲ್ವ್ಸ್‌ ತಂಡದ ಆಟಗಾರರಿಗೆ ಚಂಡೀಗಡದಲ್ಲಿ ತಂಗಲು ಅನುವಾಗುವಂತೆ ವೀಸಾ ನೀಡಲಾಗಿದೆ. ಆದ್ದರಿಂದ ತಂಡದ ಆಟಗಾರರು ಇನ್ನು ಚಂಡೀಗಡದ ಹೋಟೆಲ್‌ನಲ್ಲಿ ತಂಗುವರು’ ಎಂದು ಪಿಸಿಎ ಜಂಟಿ ಕಾರ್ಯದರ್ಶಿ ಜಿ.ಎಸ್‌. ವಾಲಿಯಾ ನುಡಿದಿದ್ದಾರೆ. ಅರ್ಹತಾ ಹಂತದಲ್ಲಿ ಆಡುವ ಇತರ ಮೂರು ತಂಡಗಳ ಆಟಗಾರರೂ ಚಂಡೀಗಡದ ಹೋಟೆಲ್‌ನಲ್ಲಿ ತಂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.