ADVERTISEMENT

ವೂಲ್ಮರ್‌ಗಾಗಿ ಕಪ್ ಗೆಲ್ಲಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:20 IST
Last Updated 20 ಫೆಬ್ರುವರಿ 2011, 18:20 IST

ಕರಾಚಿ (ಪಿಟಿಐ): ‘ದೇಶಕ್ಕೆ ಮಾತ್ರವಲ್ಲ ಮಾಜಿ ಕೋಚ್ ಬಾಬ್ ವೂಲ್ಮರ್ ಅವರಿಗಾಗಿ ವಿಶ್ವಕಪ್ ಟ್ರೋಫಿ ಗೆಲ್ಲಬೇಕು’ ಎಂದು ಇಂಜಮಾಮ್ ಉಲ್ ಹಕ್ ಅವರು ಪಾಕಿಸ್ತಾನದ ಕ್ರಿಕೆಟಿಗರಲ್ಲಿ ಕೇಳಿಕೊಂಡಿದ್ದಾರೆ.

‘ಶಾಹಿದ್ ಅಫ್ರಿದಿ ನೇತೃತ್ವದ ತಂಡ ಪ್ರಸಕ್ತ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಬೇಕು. ಆ ಮೂಲಕ ದೇಶಕ್ಕೆ ಗೌರವ ತರಬೇಕು. ಮಾತ್ರವಲ್ಲ ನಮ್ಮನ್ನಗಲಿದ ಕೋಚ್ ಬಾಬ್ ವೂಲ್ಮರ್ ಅವರಿಗಾಗಿ ಕಪ್ ಜಯಿಸಬೇಕು’ ಎಂದು ಮಾಜಿ ನಾಯಕ ಭಾನುವಾರ ತಿಳಿಸಿದರು.

ಪಾಕ್ ಕೋಚ್ ಆಗಿದ್ದ ಬಾಬ್ ವೂಲ್ಮರ್ ಅವರು 2007ರ ವಿಶ್ವಕಪ್ ಟೂರ್ನಿಯ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದರು. ಅವರ ಮರಣದ ಹಿಂದಿನ ನಿಜವಾದ ಕಾರಣ ಇನ್ನೂ ಹೊರಬಿದ್ದಿಲ್ಲ.

‘ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದೆವು. ಈ ಬಾರಿ ಚಾಂಪಿಯನ್ ಆದರೆ, ಆ ಕಹಿಯನ್ನು ಮರೆಸಬಹುದು’ ಎಂದು ಇಂಜಮಾಮ್ ಅಭಿಪ್ರಾಯಪಟ್ಟರು.

ಟೂರ್ನಿಯಲ್ಲಿ ಪಾಕ್ ತಂಡದ ಯಶಸ್ಸಿನಲ್ಲಿ ಯೂನಿಸ್ ಖಾನ್ ಅವರಿಗೆ ಪ್ರಮುಖ ಪಾತ್ರ ನಿರ್ವಹಿಸಲಿಕ್ಕಿದೆ ಎಂದು ಅವರು ನುಡಿದರು. ‘ಯೂನಿಸ್ ತಂಡದ ಪ್ರಮುಖ ಸದಸ್ಯ. ಇನಿಂಗ್ಸ್‌ಗೆ ಬಲ ನೀಡುವ ತಾಕತ್ತು ಅವರಿಗಿದೆ. ಮಾತ್ರವಲ್ಲ ಪೂರ್ಣ 50 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಬಲ್ಲರು. ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬೇಕು. ಏಕೆಂದರೆ ಈ ಕ್ರಮಾಂಕ ಅವರಿಗೆ ಸೂಕ್ತವಾದುದು. ಟೆಸ್ಟ್‌ನಲ್ಲಿ ಇದೇ ಕ್ರಮಾಂಕದಲ್ಲಿ ಅವರು ಹೆಚ್ಚು ರನ್‌ಗಳನ್ನು ಪೇರಿಸಿದ್ದಾರೆ’ ಎಂದು ಹೇಳಿದರು.

ವಿಶ್ವಕಪ್ ಟೂರ್ನಿಯ ವೇಳೆ ಎದುರಾಗುವ ಒತ್ತಡ ನಿಭಾಯಿಸಲು ಅನುಭವ ಅಗತ್ಯ ಎಂದು ಇಂಜಮಾಮ್ ನುಡಿದರು. ‘ಯೂನಿಸ್, ಅಫ್ರಿದಿ, ರಜಾಕ್, ಕಮ್ರನ್ ಮತ್ತು ಶೋಯಬ್ ಅಖ್ತರ್ ಅವರು ಈ ಹಿಂದೆ ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಇವರು ತಂಡದ ಇತರ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.