ADVERTISEMENT

ವೇಗದ ದಾಳಿಗೆ ತಲೆಬಾಗಿದ ಭಾರತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬ್ರಿಸ್ಬೇನ್: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡಕ್ಕೆ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಸೋಲಿನ ಆಘಾತ ಎದುರಾದರೆ, ಆಸ್ಟ್ರೇಲಿಯಾಕ್ಕೆ ಗೆಲುವಿನ ಹಾದಿಗೆ ಮರಳಿದ ಸಂಭ್ರಮ.

ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಬೆನ್ ಹಿಲ್ಫೆನಾಸ್ (33ಕ್ಕೆ 5) ಮತ್ತು ಬ್ರೆಟ್ ಲೀ (49ಕ್ಕೆ 3) ಹರಿಯಬಿಟ್ಟ ವೇಗದ ಎಸೆತಗಳ ಮುಂದೆ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ದಿಕ್ಕೆಟ್ಟು ನಿಂತಿತು. ಪರಿಣಾಮ ಆಸೀಸ್‌ಗೆ 110 ರನ್‌ಗಳ ಭರ್ಜರಿ ಗೆಲುವು. ಅದರ ಜೊತೆಗೆ ಬೋನಸ್ ಒಳಗೊಂಡಂತೆ ಐದು ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ರಿಕಿ ಪಾಂಟಿಂಗ್ ಬಳಗ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 288 ರನ್ ಕಲೆಹಾಕಿದರೆ, ಭಾರತ  43.3 ಓವರ್‌ಗಳಲ್ಲಿ 178 ರನ್‌ಗಳಿಗೆ ಮುಗ್ಗರಿಸಿತು. ಸತತ ಎರಡು ಸೋಲು ಅನುಭವಿಸಿದ್ದ ಆಸ್ಟ್ರೇಲಿಯಾ ಪುಟಿದೆದ್ದು ನಿಂತಿದೆ.

ADVERTISEMENT

ಈ ಗೆಲುವಿನ ಮೂಲಕ ಕಾಂಗರೂ ನಾಡಿನ ಬಳಗ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಆಸೀಸ್ ಐದು ಪಂದ್ಯಗಳಿಂದ 14 ಪಾಯಿಂಟ್ ಕಲೆಹಾಕಿದೆ. ಇಷ್ಟೇ ಪಂದ್ಯಗಳನ್ನಾಡಿ ರುವ ಭಾರತ 10 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಸುಮಾರು ಎರಡು ವರ್ಷಗಳ ಬಿಡುವಿನ ಬಳಿಕ ಆಸೀಸ್ ಏಕದಿನ ತಂಡದಲ್ಲಿ ಆಡಿದ ಹಿಲ್ಫೆನಾಸ್ ಭಾರತವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದರು. ಈ ಕೆಲಸದಲ್ಲಿ ಬ್ರೆಟ್ ಲೀ ಅವರ ನೆರವಿಗೆ ನಿಂತರು. ನಾಯಕ ದೋನಿ (56, 84 ಎಸೆತ, 2 ಬೌಂ, 1 ಸಿಕ್ಸರ್) ಅವರನ್ನು ಹೊರತುಪಡಿಸಿದರೆ, ಭಾರತದ ಎಲ್ಲ ಆಟಗಾರರು ವಿಫಲರಾದರು. 36 ರನ್ ಗಳಿಸುವಷ್ಟರಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡ ಭಾರತಕ್ಕೆ ಮರುಹೋರಾಟ ನಡೆಸಲು ಆಗಲಿಲ್ಲ.
ಉತ್ತಮ ಆರಂಭ: ಮ್ಯಾಥ್ಯೂ ವೇಡ್ (45) ಮತ್ತು ಡೇವಿಡ್ ವಾರ್ನರ್ (43) ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಆಸೀಸ್‌ಗೆ ಉತ್ತಮ ಆರಂಭ ನೀಡಿದ್ದರು. 13 ರನ್ ಅಂತರದಲ್ಲಿ ವಾರ್ನರ್ ಮತ್ತು ರಿಕಿ ಪಾಂಟಿಂಗ್ (7) ಮರಳಿದಾಗ ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ `ಮಹಿ~ ಬಳಗದ ಬೌಲರ್‌ಗಳು ಅದರಲ್ಲಿ ವಿಫಲರಾದರು.

ಪೀಟರ್ ಫಾರೆಸ್ಟ್ (52, 71 ಎಸೆತ, 3 ಬೌಂ) ಹಾಗೂ ಮೈಕ್ ಹಸ್ಸಿ (59, 52 ಎಸೆತ, 6 ಬೌಂ) ನಾಲ್ಕನೇ ವಿಕೆಟ್‌ಗೆ ಭರ್ತಿ 100 ರನ್‌ಗಳ ಜೊತೆಯಾಟ ನೀಡಿದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು.
ಡೇವಿಡ್ ಹಸ್ಸಿ (ಔಟಾಗದೆ 26, 20 ಎಸೆತ, 1 ಬೌಂ, 1 ಸಿಕ್ಸರ್) ಮತ್ತು ಡೇನಿಯಲ್ ಕ್ರಿಸ್ಟಿಯನ್ (ಔಟಾಗದೆ 30, 18 ಎಸೆತ, 5 ಬೌಂ) ಕೊನೆಯ ಆರು ಓವರ್‌ಗಳಲ್ಲಿ 65 ರನ್‌ಗಳನ್ನು ಕಲೆಹಾಕಿದರು. ಇರ್ಫಾನ್ ಪಠಾಣ್           (61ಕ್ಕೆ 3) ಭಾರತದ ಪರ ಯಶಸ್ವಿ ಬೌಲರ್ ಎನಿಸಿದರು.

ಔಟ್... ನಾಟೌಟ್...: ಆಸೀಸ್ ಇನಿಂಗ್ಸ್‌ನ 29ನೇ ಓವರ್ ವೇಳೆ `ಪ್ರಹಸನ~ವೊಂದು ನಡೆಯಿತು. ಸುರೇಶ್ ರೈನಾ ಎಸೆತದಲ್ಲಿ ಮೈಕ್ ಹಸ್ಸಿ ವಿರುದ್ಧ ಭಾರತ ಸ್ಟಂಪ್‌ಔಟ್‌ಗೆ ಮನವಿ ಮಾಡಿತು. ಮೈದಾನದ ಅಂಪೈರ್‌ಗಳು ಮೂರನೇ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಮೊರೆ ಹೋದರು.

ಹಸ್ಸಿ ಔಟ್ ಅಲ್ಲವೆಂಬುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಆದರೆ ಕ್ರೀಡಾಂಗಣದ ಬೃಹತ್ ಸ್ಕ್ರೀನ್‌ನಲ್ಲಿ `ಔಟ್~ ಎಂದು ತೋರಿಸಲಾಯಿತು. ಅವರು ಪೆವಿಲಿಯನ್‌ನತ್ತ ಹೆಜ್ಜೆಯಿಟ್ಟರು. ಈ ವೇಳೆ ಮೈದಾನದ ಅಂಪೈರ್ ಬಿಲಿ ಬೌಡೆನ್ ಓಡುತ್ತಾ ಬಂದರಲ್ಲದೆ, ಹಸ್ಸಿ ಅವರನ್ನು ಮತ್ತೆ ಕ್ರೀಸ್‌ಗೆ ತೆರಳುವಂತೆ ಸೂಚಿಸಿದ್ದಾರೆ!

ಮೂರನೇ ಅಂಪೈರ್ ಆಕ್ಸೆನ್‌ಫೋರ್ಡ್ ಮಾಡಿದ ಎಡವಟ್ಟು ಈ ಗೊಂದಲಕ್ಕೆ ಕಾರಣ. ಅವರು `ನಾಟೌಟ್~ ಬದಲು `ಔಟ್~ ಎಂದು ತೋರಿಸುವ ಬಟನ್ ಅದುಮಿದ್ದರು. ತಾವು ಮಾಡಿದ ತಪ್ಪು ಅರಿತ ಕೂಡಲೇ ಬೌಡೆನ್ ಜೊತೆ ಮಾತನಾಡಿ ಬ್ಯಾಟ್ಸ್‌ಮನ್‌ನ್ನು ಮತ್ತೆ ಕ್ರೀಸ್‌ಗೆ ಕರೆಸುವಂತೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 288

ಮ್ಯಾಥ್ಯೂ ವೇಡ್ ಸಿ ಮತ್ತು ಬಿ ರೋಹಿತ್ ಶರ್ಮ  45
ಡೇವಿಡ್ ವಾರ್ನರ್ ಸಿ ತೆಂಡೂಲ್ಕರ್ ಬಿ ಇರ್ಫಾನ್ ಪಠಾಣ್  43
ರಿಕಿ ಪಾಂಟಿಂಗ್ ಸಿ ಪಠಾಣ್ ಬಿ ಜಹೀರ್ ಖಾನ್  07
ಪೀಟರ್ ಫಾರೆಸ್ಟ್ ಸಿ ಕೊಹ್ಲಿ ಬಿ ಇರ್ಫಾನ್ ಪಠಾಣ್  52
ಮೈಕ್ ಹಸ್ಸಿ ಸಿ ರೈನಾ ಬಿ ಇರ್ಫಾನ್ ಪಠಾಣ್  59
ಡೇವಿಡ್ ಹಸ್ಸಿ ಔಟಾಗದೆ  26
ಡೇನಿಯಲ್ ಕ್ರಿಸ್ಟಿಯನ್ ಔಟಾಗದೆ  30

ಇತರೆ: (ಬೈ-2, ಲೆಗ್‌ಬೈ-12, ವೈಡ್-12)  26

ವಿಕೆಟ್ ಪತನ: 1-70 (ವಾರ್ನರ್; 12.6), 2-83 (ಪಾಂಟಿಂಗ್; 19.2), 3-117 (ವೇಡ್; 27.4), 4-217 (ಮೈಕ್ ಹಸ್ಸಿ; 43.1), 5-223 (ಫಾರೆಸ್ಟ್; 43.6)

ಬೌಲಿಂಗ್: ಜಹೀರ್ ಖಾನ್ 10-0-46-1, ಆರ್. ವಿನಯ್ ಕುಮಾರ್ 10-0-60-0, ಇರ್ಫಾನ್ ಪಠಾಣ್ 10-0-61-3, ಸುರೇಶ್ ರೈನಾ 10-0-44-0, ಉಮೇಶ್ ಯಾದವ್ 7-0-46-0, ರೋಹಿತ್ ಶರ್ಮ 3-0-17-1

ಭಾರತ: 43.3 ಓವರ್‌ಗಳಲ್ಲಿ 178

ಗೌತಮ್ ಗಂಭೀರ್ ಸಿ ವೇಡ್ ಬಿ ಬ್ರೆಟ್ ಲೀ  05
ಸಚಿನ್ ತೆಂಡೂಲ್ಕರ್ ಸಿ ಡೊಹರ್ಟಿ ಬಿ ಬೆನ್ ಹಿಲ್ಫೆನಾಸ್  03
ವಿರಾಟ್ ಕೊಹ್ಲಿ ಸಿ ಡೇವಿಡ್ ಹಸ್ಸಿ ಬಿ ಬೆನ್ ಹಿಲ್ಫೆನಾಸ್  12
ರೋಹಿತ್ ಶರ್ಮ ಸಿ ವೇಡ್ ಬಿ ಬ್ರೆಟ್ ಲೀ  00
ಸುರೇಶ್ ರೈನಾ ಸಿ ವೇಡ್ ಬಿ ಡೇನಿಯಲ್ ಕ್ರಿಸ್ಟಿಯನ್  28
ಮಹೇಂದ್ರ ಸಿಂಗ್ ದೋನಿ ಸಿ ಕ್ರಿಸ್ಟಿಯನ್ ಬಿ ಬೆನ್ ಹಿಲ್ಫೆನಾಸ್  56
ರವೀಂದ್ರ ಜಡೇಜ ಸಿ ಫಾರೆಸ್ಟ್ ಬಿ ಮಿಷೆಲ್ ಸ್ಟಾರ್ಕ್  18
ಇರ್ಫಾನ್ ಪಠಾಣ್ ಸಿ ವೇಡ್ ಬಿ ಬೆನ್ ಹಿಲ್ಫೆನಾಸ್  19
ಆರ್. ವಿನಯ್ ಕುಮಾರ್ ಬಿ ಬ್ರೆಟ್ ಲೀ  06
ಜಹೀರ್ ಖಾನ್ ಸಿ ವೇಡ್ ಬಿ ಬೆನ್ ಹಿಲ್ಫೆನಾಸ್  09
ಉಮೇಶ್ ಯಾದವ್ ಔಟಾಗದೆ  06

ಇತರೆ: (ಲೆಗ್‌ಬೈ-4, ವೈಡ್-10, ನೋಬಾಲ್-2)  16

ವಿಕೆಟ್ ಪತನ: 1-8 (ಗಂಭೀರ್; 1.3), 2-15 (ಸಚಿನ್; 4.4), 3-16 (ರೋಹಿತ್; 5.5), 4-36 (ಕೊಹ್ಲಿ; 10.3), 5-82 (ರೈನಾ; 22.2), 6-114 (ಜಡೇಜ; 30.4), 7-149 (ದೋನಿ; 37.2), 8-162 (ವಿನಯ್; 40.2), 9-168 (ಪಠಾಣ್; 41.1), 10-178 (ಜಹೀರ್; 43.3)

ಬೌಲಿಂಗ್: ಬೆನ್ ಹಿಲ್ಫೆನಾಸ್ 9.3-1-33-5, ಬ್ರೆಟ್ ಲೀ 10-0-49-3, ಡೇನಿಯಲ್ ಕ್ರಿಸ್ಟಿಯನ್ 6-0-27-1, ಮಿಷೆಲ್ ಸ್ಟಾರ್ಕ್ 8-0-36-1, ಕ್ಸೇವಿಯರ್ ಡೊಹರ್ಟಿ 10-029-0

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 110 ರನ್ ಗೆಲುವು ಹಾಗೂ 5 ಪಾಯಿಂಟ್

ಪಂದ್ಯಶ್ರೇಷ್ಠ: ಬೆನ್ ಹಿಲ್ಫೆನಾಸ್, ಮುಂದಿನ ಪಂದ್ಯ: ಭಾರತ- ಶ್ರೀಲಂಕಾ (ಫೆ.21, ಬ್ರಿಸ್ಬೇನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.