ADVERTISEMENT

ವೈದ್ಯಕೀಯ ರಜೆ ಮೇಲೆ ತೆರಳಿದ ಪ್ರಬೀರ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಕೋಲ್ಕತ್ತ (ಪಿಟಿಐ): ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಕುರಿತಂತೆ ಎದ್ದಿರುವ ವಿವಾದ ತಣ್ಣಗಾಗುವ ಮುನ್ನವೇ ಈಗ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಬಿಸಿಸಿಐ ಹಿರಿಯ ಕ್ಯುರೇಟರ್ ಪ್ರಬೀರ್ ಮುಖರ್ಜಿ ವೈದ್ಯಕೀಯ `ರಜೆ'ಯ ಮೇಲೆ ತೆರಳಿದ್ದಾರೆ.

1985ರಿಂದ ಇಲ್ಲಿನ ಪಿಚ್ ಸಿದ್ದಪಡಿಸುವ ಕಾರ್ಯ ಮಾಡುತ್ತಿರುವ ಪ್ರಬೀರ್ ವೈದ್ಯಕೀಯ ರಜೆಯ ಮೇಲೆ ತೆರಳುವುದಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಶನಿವಾರ ಪತ್ರ ಬರೆದಿದ್ದಾರೆ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಕಾರಣ ಬಿಸಿಸಿಐ ಪಿಚ್ ತಯಾರಿಸಲು ಪ್ರಬೀರ್ ಬದಲು ಆಶೀಶ್ ಭೌಮಿಕ್ ಅವರನ್ನು ನೇಮಿಸಿತ್ತು ಎಂದು ವರದಿಯಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 5ರಂದು ನಡೆಯಲಿದೆ.

`ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಸಜ್ಜುಗೊಳಿಸುವ ಕೆಲಸವನ್ನು ನನ್ನಿಂದ ಕ್ಯುರೇಟರ್ ಭೌಮಿಕ್‌ಗೆ ನೀಡಿರುವುದರಿಂದ ಅವಮಾನವಾಗಿದೆ' ಎಂದು ಪ್ರಬೀರ್ ಹೇಳಿದ್ದಾರೆ, ಆದರೆ,  ಪಿಚ್ ಸಿದ್ದಪಡಿಸುತ್ತಿರುವ ಭೌಮಿಕ್ `ಪ್ರಬೀರ್ ನನ್ನ ಗುರು. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದು ಹೇಳುವ ಮೂಲಕ ವಿವಾದ ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಬೀರ್ ರಜೆಯ ಮೇಲೆ ತೆರಳಿದ್ದಾರೆ. ಅಷ್ಟೇ ಅಲ್ಲ, ಕ್ರಿಕೆಟ್ ಮಂಡಳಿಯ ಕ್ರಮದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

`ಕಳೆದ ರಾತ್ರಿ ನನ್ನ ರಕ್ತದ ಒತ್ತಡ 100ರಿಂದ 170ಕ್ಕೆ ಹೆಚ್ಚಾಗಿತ್ತು. ಆದ್ದರಿಂದ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ಒಂದು ತಿಂಗಳು ರಜೆಯ ಮೇಲೆ ತೆರಳುತ್ತಿದ್ದೇನೆ' ಎಂದು ಸಿಎಬಿಗೆ ಪ್ರಬೀರ್ ತಿಳಿಸಿದ್ದಾರೆ.

`ಸಾಕಷ್ಟು ಪ್ರಮುಖ ಟೂರ್ನಿಗಳಿಗೆ ಪಿಚ್ ಸಜ್ಜುಗೊಳಿಸಿದ್ದೇನೆ. 2004ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ಗೂ ಪಿಚ್ ತಯಾರು ಮಾಡಿದ್ದೆ. ಈ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಂದೇ ಒಂದು ತಕರಾರು ತಗೆದಿರಲಿಲ್ಲ' ಎಂದೂ ಅವರು ಹೇಳಿದ್ದಾರೆ.

`ನನ್ನ ಮಗಳು ಮೇ 25ರಂದು ಮತ್ತು ಪತ್ನಿ ಮೇ 31ರಂದು ತೀರಿಕೊಂಡಿದ್ದರು. ವೈಯಕ್ತಿಕ ಸಂಕಷ್ಟವಿದ್ದರೂ ಒಂದೂ ದಿನ ರಜೆ ಪಡೆಯದೇ ಕೆಲಸ ಮಾಡಿದ್ದೇನೆ. ಪತ್ನಿ ಮೃತಪಟ್ಟ ಮರುದಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿದ್ದೆ. ನನ್ನ ಬದ್ದತೆಯ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ' ಎಂದು ಪ್ರಬೀರ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.