ನವದೆಹಲಿ (ಪಿಟಿಐ): ಮಾಜಿ ಅಥ್ಲೀಟ್ ಶಾಂತಿ ಸುಂದರರಾಜನ್ ಅವರ `ಬಡತನ ಪರಿಸ್ಥಿತಿ'ಯನ್ನು ಅರಿತಿರುವ ಕೇಂದ್ರ ಕ್ರೀಡಾ ಸಚಿವಾಲಯ ಗುರುವಾರ ನೆರವಿನ ಹಸ್ತ ಚಾಚಿದ್ದು, 60,500 ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
`ಕ್ರೀಡಾಪಟುಗಳ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಈ ಹಣವನ್ನು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಜೂರು ಮಾಡಿದ್ದಾರೆ' ಎಂದು ಕ್ರೀಡಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಶಾಂತಿ ಅವರು ಜೀವನ ನಿರ್ವಹಣೆಗೆ ತಮಿಳುನಾಡಿನ ಇಟ್ಟಿಗೆಯ ಭಟ್ಟಿಯೊಂದರಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಸರ್ಕಾರದ ಗಮನ ಸೆಳೆದಿದ್ದವು. ಇದರ ಬೆನ್ನಲ್ಲೆ ಸರ್ಕಾರ ಈ ಭರವಸೆ ನೀಡಿದೆ.
`ಶಾಂತಿ ಅವರು ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌ಐಎಸ್) ಕೋಚಿಂಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಅವರ ಊಟ-ವಸತಿ, ಕ್ರೀಡಾ ಸಲಕರಣೆಗಳ ವೆಚ್ಚವನ್ನು ಸರಿದೂಗಿಸಲು ಸರ್ಕಾರ 60,500 ರೂಪಾಯಿಗಳನ್ನು ಮಂಜೂರು ಮಾಡಿದೆ' ಎಂದೂ ಸಚಿವಾಲಯ ತಿಳಿಸಿದೆ.
2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಶಾಂತಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಬಳಿಕ ನಡೆದ ಲಿಂಗಪತ್ತೆ ಪರೀಕ್ಷೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಅವರಿಗಿಲ್ಲ ಎಂದು ಸಾಬೀತಾಗಿ ಪದಕ ಹಿಂಪಡೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.