ADVERTISEMENT

ಶೂಟಿಂಗ್: ಭಾರತದ ಸ್ಪರ್ಧಿಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಭಾರತದ ಹೀನಾ ಸಿಧು ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಪಡೆದರು.

ಕೊರಿಯಾದ ಚಾಂಗ್ವನ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಈವರೆಗೆ ಎರಡು ಪದಕಗಳನ್ನು ಜಯಿಸಿದ ಸಂತಸದಲ್ಲಿದ್ದ ಭಾರತೀಯ ಶೂಟರ್‌ಗಳು ಭಾನುವಾರ ನಿರಾಸೆ ಅನುಭವಿಸಿದರು. ಫೈನಲ್‌ಗೆ ಅರ್ಹತೆ ಪಡೆದ ಎಂಟು ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದಿದ್ದ ಹೀನಾ ಸಿಧು, ಅಂತಿಮ ಸುತ್ತಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದರು.

ಅರ್ಹತಾ ಸುತ್ತಿನಲ್ಲಿ 388 ಪಾಯಿಂಟ್ ಗಳಿಸಿದ್ದ ಅವರು ಫೈನಲ್‌ನಲ್ಲಿ ಕೇವಲ 75.7 ಪಾಯಿಂಟ್ ಗಳಿಸಿದರು. ಅನ್ನು ರಾಜ್ ಸಿಂಗ್ 14ನೇ ಮತ್ತು ರುಚಿತಾ ವಿನೇರ್ಕರ್ 27ನೇ ಸ್ಥಾನಕ್ಕೆ ಕುಸಿದರು.

ಈ ವಿಭಾಗದಲ್ಲಿ ಚೀನಾದ ಜಿ ರೆನ್ (201.8 ಪಾಯಿಂಟ್) ಚಿನ್ನ ತಮ್ಮದಾಗಿಸಿಕೊಂಡರು. ಸೆರ್ಬಿಯಾದ ಜೊರಾನಾ ಅರುನೋವಿಕ್ (199.0 ಪಾಯಿಂಟ್) ಬೆಳ್ಳಿ, ಕೊರಿಯಾದ ಕಿಮ್ ಜಂಗ್ಮಿ (177.8 ಪಾಯಿಂಟ್) ಕಂಚು ಗೆದ್ದುಕೊಂಡರು.

ಮಹಿಳೆಯರ 50 ಮೀಟರ್ `ರೈಫಲ್ 3 ಪೊಸಿಷನ್' ವಿಭಾಗದ ಅರ್ಹತಾ ಸುತ್ತಿನಲ್ಲಿ ತೇಜಸ್ವಿನಿ ಸಾವಂತ್, ಲಜ್ಜಾ ಗಾವುಸ್ವಾಮಿ ಮತ್ತು ಮೀನಾ ಕುಮಾರಿ ಕ್ರಮವಾಗಿ 18, 24 ಮತ್ತು 33ನೇ ಸ್ಥಾನ ಪಡೆದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ವಿಜಯ್ ಕುಮಾರ್, ಪೆಂಬಾ ತಮಂಗ್ ಮತ್ತು ಹರ್‌ಪ್ರೀತ್ ಸಿಂಗ್, ಸೋಮವಾರ ನಡೆಯಲಿರುವ ಪುರುಷರ 25 ಮೀಟರ್ ರ‌್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೆಣೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.