ADVERTISEMENT

ಶೇನ್‌ ವಾರ್ನ್‌ ಅವರ ‘ಶತಮಾನದ ಎಸೆತ’ಕ್ಕೆ 25 ವರ್ಷ

ಏಜೆನ್ಸೀಸ್
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಶೇನ್ ವಾರ್ನ್
ಶೇನ್ ವಾರ್ನ್   

ಬೆಂಗಳೂರು: ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ  ಆ ದಿನ ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ ಅವರು ಅವಾಕ್ಕಾಗಿ ನಿಂತಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಅವರ ಎಡಬದಿಯ ಸ್ಡಂಪ್‌ನ ಹೊರಗೆ ಪುಟಿದ ಚೆಂಡು ಮೊನಚಾದ ತಿರುವು ಪಡೆದು ಆಫ್‌ಸ್ಟಂಪ್‌ಗೆ ಬಡಿದಿತ್ತು.

ಆಸ್ಟ್ರೇಲಿಯಾ ತಂಡದ ಫೀಲ್ಡರ್‌ಗಳು ಸಂಭ್ರಮದ ಹೊಳೆಯಲ್ಲಿ ತೇಲಿದ್ದರು. ‘ಸ್ಪಿನ್ ಮಾಂತ್ರಿಕ’ ಶೇನ್ ವಾರ್ನ್ ಅವರ ಆ ಮೋಡಿಯು ‘ಶತಮಾನದ ಎಸೆತ’ವಾಗಿ ಇತಿಹಾಸದ ಪುಟ ಸೇರಿತು. ಅಪರೂಪದ ಎಸೆ ತದ ಪ್ರಯೋಗಕ್ಕೆ ಸೋಮವಾರ 25 ವರ್ಷ ತುಂಬಿತು.

1993ರ ಜೂನ್‌ 4ರಂದು ನಡೆದಿದ್ದ ಆ್ಯಷಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಟೆಸ್ಟ್‌ ಪಂದ್ಯದಲ್ಲಿ ಈ ಚಮತ್ಕಾರ ನಡೆದಿತ್ತು. ಔಟಾಗಿದ್ದ ಮೈಕ್ ಗ್ಯಾಟಿಂಗ್, ಅಂಪೈರ್‌ ಇಬ್ಬರೂ ಚಕಿತಗೊಂಡಿದ್ದರು. ಸ್ವತಃ ಶೇನ್ ವಾರ್ನ್ ಅವರಿಗೂ ಕೆಲಕ್ಷಣ ನಂಬಲು ಆಗಿರಲಿಲ್ಲ.  ‘ಅದೊಂದು ಅನೂಹ್ಯ ಎಸೆತ’ ಎಂದು ಅವರು ಹೇಳಿದ್ದರು. ಶೇನ್ ಅವರ ವೃತ್ತಿಜೀವನದ ಆರಂಭದ ದಿನಗಳು ಅಷ್ಟೇನೂ ಸೊಗಸಾಗಿರಲಿಲ್ಲ. 1992 ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಅವರು ಭಾರತ ತಂಡದ ಎದುರು ಮೊದಲ ಟೆಸ್ಟ್‌ ಆಡಿದ್ದರು. ಆದರೆ ಆಗ (150ಕ್ಕೆ1) ಅವರು ತುಟ್ಟಿಯಾಗಿದ್ದರು. ಅದಾಗಿ ಸುಮಾರು ಒಂದು ವರ್ಷದ ನಂತರ ಅವರ ಅದೃಷ್ಟ ಖುಲಾಯಿಸಿತು. ಮೈಕ್ ಗ್ಯಾಟಿಂಗ್ ವಿಕೆಟ್‌ನೊಂದಿಗೆ ಅವರ ವೃತ್ತಿಜೀವನವೂ ಹೊಸ ತಿರುವು ಪಡೆದಿತ್ತು. ಒಟ್ಟು 145 ಟೆಸ್ಟ್‌ಗಳನ್ನು ಆಡಿ 708 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2007ರಲ್ಲಿ ನಿವೃತ್ತಿಯಾದರು. ಆದರೆ ಇಲ್ಲಿಯವರೆಗೂ ಅವರು ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪಟ್ಟಿಯ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಇದ್ದಾರೆ.

ADVERTISEMENT

ಶೇನ್ ಅವರ ಸಾಧನೆಯ ಕುರಿತು ಐಸಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಿದೆ. ತನ್ನ ಜಾಲತಾಣದಲ್ಲಿ ವಿಶೇಷ ಲೇಖನ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.