ADVERTISEMENT

ಶ್ರೀನಿವಾಸನ್‌ ಆಯ್ಕೆ ಖಚಿತ

ಚೆನ್ನೈನಲ್ಲಿ ಇಂದು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 19:43 IST
Last Updated 28 ಸೆಪ್ಟೆಂಬರ್ 2013, 19:43 IST
ಶ್ರೀನಿವಾಸನ್‌ ಆಯ್ಕೆ ಖಚಿತ
ಶ್ರೀನಿವಾಸನ್‌ ಆಯ್ಕೆ ಖಚಿತ   

ಚೆನ್ನೈ (ಪಿಟಿಐ/ ಐಎಎನ್‌ಎಸ್‌): ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ನಡೆಯಲಿದ್ದು, ಎನ್‌. ಶ್ರೀನಿವಾಸನ್‌ ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ದಕ್ಷಿಣ ವಲಯದ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸನ್‌ ಹೆಸರನ್ನು ಮಾತ್ರ ನಾಮನಿರ್ದೇಶನ ಮಾಡಿದ್ದಾರೆ.  ಈ ಕಾರಣ ಅವರು ಅವಿರೋಧವಾಗಿ ಅಯ್ಕೆಯಾಗಲಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದರೂ ಅವರು ತಕ್ಷಣ ಅಧಿಕಾರ ಸ್ವೀಕರಿಸುವಂತಿಲ್ಲ. ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶದ ಬಳಿಕವೇ ಶ್ರೀನಿವಾಸನ್‌ ಭವಿಷ್ಯ ನಿರ್ಧಾರವಾಗಲಿದೆ.

ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸನ್‌ ಹೆಸರು ನಿರೀಕ್ಷೆ­ಯಂತೆಯೇ ನಾಮನಿರ್ದೇಶನಗೊಂಡಿತು. ಆದರೆ ಶನಿವಾರ ಇತರ ಕೆಲವು ಹುದ್ದೆಗಳಿಗೆ ನಾಮನಿರ್ದೇಶ­ನದ ವೇಳೆ ಅಚ್ಚರಿಯ ಬೆಳವಣಿಗೆಗಳು ಕಂಡುಬಂದವು.

ಸುಧೀರ್ ದಬಿರ್‌ ಮತ್ತು ನಿರಂಜನ್‌ ಶಾ ಇನ್ನೊಂದು ಅವಧಿಗೆ ಉಪಾಧ್ಯಕ್ಷರಾಗಿ ಮುಂದುವರಿ­ಯುವ ಅವಕಾಶ ಕಳೆದುಕೊಂಡಿದ್ದಾರೆ. ಕೇಂದ್ರ ವಲಯದಿಂದ ಸುಧೀರ್‌ ಬದಲು ರಾಜೀವ್‌ ಶುಕ್ಲಾ ಹಾಗೂ ಪಶ್ಚಿಮ ವಲಯದಿಂದ ಶಾ ಬದಲು ರವಿ ಸಾವಂತ್‌ ನೂತನ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವರು.

ಅರುಣ್‌ ಜೇಟ್ಲಿ ಇನ್ನೊಂದು ಅವಧಿಗೆ ಉಪಾಧ್ಯಕ್ಷ­ರಾಗಿ ಮುಂದುವರಿಯಲು ನಿರಾಕರಿಸಿದ್ದಾರೆ ಎನ್ನ­ಲಾ­ಗಿದೆ. ಅವರ ಬದಲು ಉತ್ತರ ವಲಯದಿಂದ ಸ್ನೇಹ್‌ ಬನ್ಸಲ್‌ ಉಪಾಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.

ಸುಧೀರ್‌ ದಬಿರ್‌ ಅವರು ಶ್ರೀನಿವಾಸನ್‌ ‘ವಿರೋಧಿ’ ಎನಿಸಿರುವ ಶಶಾಂಕ್‌ ಮನೋಹರ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ನಿರಂಜನ್‌ ಶಾ ಬಿಸಿಸಿಐನ ಇನ್ನೊಬ್ಬ ಮಾಜಿ ಅಧ್ಯಕ್ಷ ಶರದ್‌ ಪವಾರ್‌ಗೆ ಆಪ್ತರಾಗಿದ್ದಾರೆ. ಆದ್ದರಿಂದ ಇವರಿಬ್ಬರು ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ ಚಿತ್ರಕ್‌ ಮಿತ್ರಾ ಮತ್ತು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ ಶಿವಲಾಲ್‌ ಯಾದವ್‌ ಇನ್ನೊಂದು ಅವಧಿಗೆ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 

ಮಂಡಳಿಯ ಖಜಾಂಚಿ ಹುದ್ದೆಗೆ ಹರಿಯಾಣ ಕ್ರಿಕೆಟ್‌ ಸಂಸ್ಥೆ ಮುಖ್ಯಸ್ಥ ಅನಿರುದ್ಧ್‌ ಚೌಧರಿ ಹೆಸರು ನಾಮನಿರ್ದೇಶನಗೊಂಡಿದೆ. ಇದುವರೆಗೆ ಖಜಾಂಚಿ­ಯಾಗಿದ್ದ ರವಿ ಸಾವಂತ್‌ ಉಪಾಧ್ಯಕ್ಷ­ರಾಗಲಿರುವ ಕಾರಣ ಚೌಧರಿ ನೇಮಕ ನಡೆಯಲಿದೆ.

ಸಂಜಯ್‌ ಪಟೇಲ್‌ ಮತ್ತು ಅನುರಾಗ್‌ ಠಾಕೂರ್‌ ಕ್ರಮವಾಗಿ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ  ಮುಂದುವರಿಯಲಿದ್ದಾರೆ. ಐಪಿಎಲ್‌ ವಿವಾದದ ಹಿನ್ನೆಲೆಯಲ್ಲಿ ಸಂಜಯ್‌ ಜಗದಾಳೆ ತಮ್ಮ ಹುದ್ದೆ ತ್ಯಜಿಸಿದ್ದ ವೇಳೆ ಸಂಜಯ್‌ ಪಟೇಲ್‌ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಇದೀಗ ಪೂರ್ಣಾವಧಿಗೆ ಈ ಹುದ್ದೆ­ಯಲ್ಲಿ ಮುಂದುವರಿಯುವ ಅವಕಾಶ ಲಭಿಸಲಿದೆ.

ಶ್ರೀನಿವಾಸನ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶ ಹೊರಬೀಳುವ ತನಕ ಜಗಮೋಹನ್‌ ದಾಲ್ಮಿಯ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯಿದೆ.

ದಕ್ಷಿಣ ವಲಯದ ಆರು ಕ್ರಿಕೆಟ್‌ ಸಂಸ್ಥೆಗಳಾದ ತಮಿಳುನಾಡು ಕ್ರಿಕೆಟ್‌ ಸಂಸ್ಥೆ, ಕೆಎಸ್‌ಸಿಎ, ಆಂಧ್ರ ಸಿಎ, ಕೇರಳ ಸಿಎ, ಹೈದರಾಬಾದ್‌ ಸಿಎ ಮತ್ತು ಗೋವಾ ಕ್ರಿಕೆಟ್‌ ಸಂಸ್ಥೆಗಳು ಶ್ರೀನಿವಾಸನ್‌ ಪರ ನಿಂತ ಕಾರಣ ಅವರ ಅವಿರೋಧ ಆಯ್ಕೆ ನಡೆಯಲಿದೆ. ಐಪಿಎಲ್‌ ನೂತನ ಮುಖ್ಯಸ್ಥರ ನೇಮಕ ಒಳ­ಗೊಂ­ಡಂತೆ ಇತರ ಕೆಲವು ಪ್ರಮುಖ ನಿರ್ಧಾರಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗುವುದು.

ಪದಾಧಿಕಾರಿಗಳಾಗಿ ಆಯ್ಕೆಯಾಗಲಿರುವವರು...

ಅಧ್ಯಕ್ಷ: ಎನ್‌. ಶ್ರೀನಿವಾಸನ್‌
ಉಪಾಧ್ಯಕ್ಷರು: ರಾಜೀವ್‌ ಶುಕ್ಲಾ, ರವಿ ಸಾವಂತ್‌, ಸ್ನೇಹ್‌ ಬನ್ಸಲ್‌, ಚಿತ್ರಕ್‌ ಮಿತ್ರಾ, ಶಿವಲಾಲ್‌ ಯಾದವ್‌
ಕಾರ್ಯದರ್ಶಿ: ಸಂಜಯ್‌ ಪಟೇಲ್‌
ಖಜಾಂಚಿ: ಅನಿರುದ್ಧ್‌ ಚೌಧರಿ
ಜಂಟಿ ಕಾರ್ಯದರ್ಶಿ: ಅನುರಾಗ್‌ ಠಾಕೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.