ADVERTISEMENT

ಸಂಕ್ಷೀಪ್ತ ಕ್ರೀಡಾ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೀಚ್ ಗೇಮ್ಸ: ಭಾರತ ತಂಡಕ್ಕೆ ಅಗ್ರಸ್ಥಾನ
ಹಂಬಂಟೋಟಾ, ಶ್ರೀಲಂಕಾ (ಪಿಟಿಐ):
ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿ ಕೊನೆಗೊಂಡ ಚೊಚ್ಚಲ ಸೌತ್ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಜಯಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.

ಕೂಟದ ಕೊನೆಯ ದಿನವಾದ ಶುಕ್ರವಾರ ಭಾರತದ ಸ್ಪರ್ಧಿಗಳು ತಮ್ಮ ಪ್ರಾಬಲ್ಯ ಮುಂದುವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ 11 ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ ಒಟ್ಟು 27 ಪದಕಗಳು ಭಾರತದ ಮಡಿಲು ಸೇರಿದವು.

ಆತಿಥೇಯ ಶ್ರೀಲಂಕಾದ ಸ್ಪರ್ಧಿಗಳು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ ನೆಟ್‌ಬಾಲ್ ಸ್ಪರ್ಧೆಯಲ್ಲಿ ಲಂಕಾ 24-17 ಪಾಯಿಂಟ್ಸ್‌ಗಳನ್ನು ಕಲೆ ಹಾಕಿ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಕೂಟದಲ್ಲಿ ಕೊನೆಯ ಚಿನ್ನವನ್ನು ತನ್ನದಾಗಿಸಿಕೊಂಡಿತು. ಮೊದಲಾರ್ಧದಲ್ಲಿ ವಿಜಯಿ ತಂಡ 13-7ರಲ್ಲಿ ಮುನ್ನಡೆಯಲ್ಲಿತ್ತು. ಈ ತಂಡ ಒಂಬತ್ತು ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚು ಸೇರಿದಂತೆ 25 ಪದಕ ಜಯಿಸಿತು.

ಟೆನಿಸ್: ಫೈನಲ್‌ಗೆ ರುತುಜಾ
ನವದೆಹಲಿ (ಪಿಟಿಐ):
ಉತ್ತಮ ಪ್ರದರ್ಶನ ನೀಡಿದ ಪುಣೆಯ ರುತುಜಾ ಬೋಸಲೆ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿನ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ  ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರುತುಜಾ 6-4, 6-4ರ ನೇರ ಸೆಟ್‌ಗಳಿಂದ ಪ್ರಶಸ್ತಿಯ ಭರವಸೆ ಎನ್ನಿಸಿದ್ದ ರುಷ್ಮಿ ಚಕ್ರವರ್ತಿ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಫೈನಲ್‌ನಲ್ಲಿ ರುತುಜಾ ಅವರು ಇಶಾ ಲಖಾನಿ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಇಶಾ 6-4, 6-2ರಲ್ಲಿ ಸುಜನಾ ಭಾವಿಶೆಟ್ಟಿ ವಿರುದ್ಧ ಗೆಲುವು ಸಾಧಿಸಿ  ಫೈನಲ್‌ಗೆ ಲಗ್ಗೆ ಇಟ್ಟರು. ಫೈನಲ್ ಪ್ರವೇಶಿಸಿರುವುದು ಖುಷಿ ನೀಡಿದೆ ಎಂದು ರುತುಜಾ ಪ್ರತಿಕ್ರಿಯಿಸಿದರು.

ರಾಷ್ಟ್ರೀಯ ಟೂರ್ನಿಗೆ ಹ್ಯಾಂಡ್‌ಬಾಲ್ ತಂಡ
ಬೆಂಗಳೂರು:
ಚತ್ತೀಸಗಡದಲ್ಲಿ ಅಕ್ಟೋಬರ್ 16ರಿಂದ 21ರ ವರೆಗೆ ನಡೆಯಲಿರುವ 40ನೇ ಸೀನಿಯರ್ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಪುರುಷರ ತಂಡವನ್ನು ಕರ್ನಾಟಕ ಹ್ಯಾಂಡ್ ಬಾಲ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

ತಂಡ ಇಂತಿದೆ: ಜಿ. ಭಾಸ್ಕರ್ (ನಾಯಕ), ಎಂ. ಶ್ರೀನಿವಾಸನ್, ಪ್ರೇಮನಾಥ್, ಅಸ್ಟಿನ್ ಜೋಯ್‌ಫುಲ್ ಇಕ್ಬಾಲ್ ಸಿಂಗ್, ಜಗದೀಶ್, ಸಿದ್ಧಾರ್ಥ, ವಾಜೀದ್, ಆದಿತ್ಯ, ಸಿ.ಎಸ್ ಜಿತಿನ್, ಮೋಹನ್ ಲಾಲ್, ರಘು ಕುಮಾರ, ಮಣಿಕಂದನ್, ಮಹಾದೇವನ್, ಮನು, ಮಧು, ಎ. ಕುಮಾರ್ (ಕೋಚ್) ಹಾಗೂ ರಾಘವೇಂದ್ರ (ಮ್ಯಾನೇನರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.