ADVERTISEMENT

ಸಂಜನಾ, ಗ್ರೀಷ್ಮಾಗೆ ಕನಸು ನನಸಾದ ಕ್ಷಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:29 IST
Last Updated 21 ಅಕ್ಟೋಬರ್ 2017, 19:29 IST
ಸಂಜನಾ ಮತ್ತು ಗ್ರೀಷ್ಮಾ ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಸಂಜನಾ ಮತ್ತು ಗ್ರೀಷ್ಮಾ ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ನಗರದಲ್ಲಿ ಭಾನುವಾರ ಆರಂಭವಾಗಲಿರುವ 16 ವರ್ಷದೊಳಗಿನವರ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ ಸಂಜನಾ ರಮೇಶ್ ಮತ್ತು ಗ್ರೀಷ್ಮಾ ನಿರಂಜನ್‌ ಅವರ ಪಾಲಿಗೆ ವಿಶೇಷ. ರಾಜ್ಯದ ಬಾಲಕಿಯರಾದ ಇವರಿಬ್ಬರಿಗೂ ತವರಿನಲ್ಲಿ ಚಾಂಪಿಯನ್‌ಷಿಪ್ ನಡೆಯುತ್ತಿರುವುದು ಸಂಭ್ರಮ ತಂದಿದೆ. ಸಂಜನಾ ಅವರು ಭಾರತ ತಂಡದ ನಾಯಕಿಯೂ ಆಗಿದ್ದಾರೆ.

‘ಇದು ಅವಿಸ್ಮರಣೀಯ ಗಳಿಗೆ. ರಾಷ್ಟ್ರಕ್ಕಾಗಿ ಆಡಬೇಕು ಎಂಬುದು ಸಣ್ಣ ವಯಸ್ಸಿನಲ್ಲೇ ಕಂಡ ಕನಸಾಗಿತ್ತು. ಈಗ ಅದು ನನಸಾಗಿದೆ’ ಎಂದು ಸಂಜನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘13 ವರ್ಷದೊಳಗಿನವರ ವಿಭಾಗದಲ್ಲಿ ಆಡುತ್ತಿದ್ದಾಗಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಬೇಕು ಎಂಬ ಬಯಕೆ ಇತ್ತು. ಏಷ್ಯಾಕಪ್‌ನಂಥ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಇಷ್ಟು ಬೇಗ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಅನೇಕ ಆಟಗಾರ್ತಿಯರು ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅನೇಕರು ತಂಡದಲ್ಲಿ ಸ್ಥಾನವನ್ನೂ ಪಡೆದಿದ್ದಾರೆ. ಆದರೆ ನಮಗಂತೂ ಇದು ಚೊಚ್ಚಲ ಚಾಂಪಿಯನ್‌ಷಿಪ್‌. ಹೀಗಾಗಿ ಇದು ವಿಶೇಷ ಕ್ಷಣ’ ಎಂದು ಅವರು ಹೇಳಿದರು.

ADVERTISEMENT

ಜುಲೈ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಯೂತ್‌ ರಾಷ್ಟ್ರೀಯ ಟೂರ್ನಿಯಲ್ಲಿ ರಾಜ್ಯ ತಂಡ ರನ್ನರ್ ಅಪ್ ಆಗುವಲ್ಲಿ ಇವರಿಬ್ಬರು ಮಹತ್ವದ ಪಾತ್ರ ವಹಿಸಿದ್ದರು. ಇದರಿಂದ ಅವರಿಗೆ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ತಂಡ ಪ್ರಕಟಗೊಂಡಾಗ ಇಬ್ಬರಿಗೂ ಅವಕಾಶ ಲಭಿಸಿತು. ಸಂಜನಾ ಅವರಿಗೆ ನಾಯಕಿ ಪಟ್ಟವೂ ಲಭಿಸಿತು.

‘ನಾಯಕಿಯಾಗಿ ಆಯ್ಕೆಯಾದ ವಿಷಯವನ್ನು ಮೊದಲು ಹೇಳಿದ್ದು ಕೋಚ್‌. ಇದನ್ನು ಕೇಳಿ ರೋಮಾಂಚನಗೊಂಡಿದ್ದೆ. ನಾಯಕತ್ವದ ಜವಾಬ್ದಾರಿ ದೊಡ್ಡದು. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿದೆ. ಎಲ್ಲ ಆಟಗಾರ್ತಿಯರ ಬೆಂಬಲ ನನಗೆ ಸಿಗಲಿದೆ ಎಂಬ ವಿಶ್ವಾಸವಿದೆ. ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ‘ಬಿ’ ವಿಭಾಗದಿಂದ ‘ಎ’ ವಿಭಾಗಕ್ಕೆ ಬಡ್ತಿ ಪಡೆಯಬೇಕು ಎಂಬುದು ಎಲ್ಲರ ಉದ್ದೇಶ. ಅದಕ್ಕಾಗಿ ಶ್ರಮಿಸುತ್ತೇವೆ’ ಎಂದು ಸಂಜನಾ ಹೇಳಿದರು.

ತಂಡದ ಮುಖ್ಯ ಕೋಚ್‌ ಜೋರನ್ ವಿಜಿಕ್ ಅವರ ಬಗ್ಗೆ ಇಬ್ಬರೂ ಗೌರವದ ಮಾತುಗಳನ್ನಾಡಿದರು. ‘ವಿಜಿಕ್ ಅವರು ತರಬೇತಿ ನೀಡುವ ವಿಧಾನವೇ ವಿಶೇಷವಾದದ್ದು. ಬ್ಯಾಸ್ಕೆಟ್‌ಬಾಲ್‌ನಲ್ಲಿ ನಾವು ಈ ವರೆಗೆ ಬಳಸದ ತಂತ್ರಗಳನ್ನು ಅವರು ಹೇಳಿಕೊಡುತ್ತಿದ್ದಾರೆ' ಎಂದು ಸಂಜನಾ ನುಡಿದರು.

’ವಿಜಿಕ್ ಅವರಂಥ ಕೋಚ್‌ ಲಭಿಸಿರುವುದು ನಮ್ಮ ಭಾಗ್ಯ. ನಾವು ಇಲ್ಲಿಯ ವರೆಗೆ ಕಲಿತದ್ದಕ್ಕೂ ಅವರ ಬಳಿ ಕಲಿತಿರುವುದಕ್ಕೂ ಭಾರಿ ವ್ಯತ್ಯಾಸವಿದೆ. ಅವರ ಮಾರ್ಗದರ್ಶನದಲ್ಲಿ ತಂಡ ಅಪೂರ್ವ ಸಾಧನೆ ತೋರಲಿದೆ ಎಂಬ ಭರವಸೆ ಇದೆ’ ಎಂದು ಗ್ರೀಷ್ಮಾ ಹೇಳಿದರು.

ತಂಡ ಇಂತಿದೆ: ಸಂಜನಾ ರಮೇಶ್‌ (ನಾಯಕಿ), ವೈಷ್ಣವಿ ಯಾದವ್, ನೇಹಾ ಕಾರ್ವಾ, ಮೋನಿಕಾ ಜಯಕುಮಾರ್‌, ಶ್ರೀಕಲಾ ರಾಣಿ, ರಿಯಾ ಬಲಿಯನ್‌, ಖುಷಿ ಸಂಜಯ್‌ ಡೋಂಗ್ರೆ, ಪುಷ್ಪಾ ಸೆಂಥಿಲ್ ಕುಮಾರ್‌, ಅಸ್ಮತ್ ತೌಂಗೆ, ಆ್ಯನ್‌ ಮೇರಿ ಜಚಾರಿ, ಎಲಿಜಬೆತ್‌ ಎಕ್ಕಾ, ಗ್ರೀಷ್ಮಾ ನಿರಂಜನ್. ಮುಖ್ಯ ಕೋಚ್‌ ಜೋರನ್ ವಿಜಿಕ್‌, ಸಹಾಯಕ ಕೋಚ್‌: ಅನಿತಾ ಪಾಲ್‌ ದುರೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.