ADVERTISEMENT

ಸಚಿನ್ ಪ್ರಸ್ತಾವ ತಿರಸ್ಕರಿಸಿದ ಐಸಿಸಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಕೊಲಂಬೊ (ಪಿಟಿಐ): ಏಕದಿನ ಕ್ರಿಕೆಟ್ ಮಾದರಿಯ ಪಂದ್ಯಗಳಲ್ಲಿ ಕೆಲ ಬದಲಾವಣೆ ತರಬೇಕು ಎನ್ನುವ ಸಚಿನ್ ತೆಂಡೂಲ್ಕರ್ ಪ್ರಸ್ತಾವವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ.

`ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ ಕುರಿತು ಸಚಿನ್ ವಿಶ್ವಕಪ್ ನಂತರ ಐಸಿಸಿಗೆ ಪತ್ರ ಬರೆದಿದ್ದರು. ಆದರೆ ಈ ಮಾದರಿಯ ಪಂದ್ಯದಲ್ಲಿ ಬದಲಾವಣೆ ಅಗತ್ಯವಿಲ್ಲ. ಈ ಕುರಿತು ಹಲವು ಸಲ ಚರ್ಚೆಯಾಗಿತ್ತು. ಈಗಿರುವ 50 ಓವರ್‌ಗಳ ಮಾದರಿಯ ಪಂದ್ಯಗಳು ಸಮರ್ಪಕವಾಗಿವೆ~ ಎಂದು ಐಸಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರೂನ್ ಲಾರ್ಗಟ್ ಬುಧವಾರ ಸಮರ್ಥಿಸಿಕೊಂಡಿದ್ದಾರೆ.

ವಿಶ್ವಕಪ್ ಮಗಿದ ನಂತರ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ ತರಬೇಕು ಎನ್ನುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಯಿತು. ಆದರೆ ಈಗಿರುವ ಮಾದರಿಯೇ ಅತ್ಯುತ್ತಮವಾಗಿದೆ. ಆದ್ದರಿಂದ ಬದಲಾವಣೆ ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಅವರು ತಿಳಿಸಿದರು.

ಎರಡೂ ತಂಡಗಳಿಗೆ ತಲಾ 25 ಓವರ್‌ಗಳಂತೆ ನಾಲ್ಕು ಇನಿಂಗ್ಸ್ ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವುದು ಅಗತ್ಯವಿದೆ ಎಂದು ಸಚಿನ್ ಐಸಿಸಿಗೆ ಪತ್ರ ಬರೆದಿದ್ದರು. ಇದರಿಂದ ಮಂದ ಬೆಳಕು ಅಥವಾ ಪಂದ್ಯ ರದ್ದಾಗುವ ಸಾಧ್ಯತೆಯಿದ್ದರೆ ಫಲಿತಾಂಶವನ್ನು ಸುಲಭವಾಗಿ ನಿರ್ಧರಿಸಬಹುದು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.