ADVERTISEMENT

`ಸಚಿನ್- ಲಾರಾ ಹೋಲಿಕೆ ಸಲ್ಲ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ಸಚಿನ್ ತೆಂಡೂಲ್ಕರ್ ಮತ್ತು ಬ್ರಯಾನ್ ಲಾರಾ ನಡುವೆ ಹೋಲಿಕೆ ಸಲ್ಲ ಎಂದಿರುವ ಸ್ಟೀವ್ ವಾ, ಇಬ್ಬರು ಆಟಗಾರರೂ `ಸಮಾನ ಶಕ್ತಿ'ಗಳು ಎಂದಿದ್ದಾರೆ.

`ಪರಸ್ಪರ ಹೋಲಿಕೆ ಮಾಡಿ ಆಟಗಾರರ ಸಾಮರ್ಥ್ಯ ಅಳೆಯುವುದನ್ನು ನಾನು ವಿರೋಧಿಸುವೆ. ಇದು ಅನಗತ್ಯ ವಿವಾದಕ್ಕೆ ಎಡೆಮಾಡಿಕೊಡುತ್ತದೆ. ಸಚಿನ್ ಮತ್ತು ಲಾರಾ ವಿಭಿನ್ನ ಪರಿಸ್ಥಿತಿಯಲ್ಲಿ, ವಿಭಿನ್ನ ರೀತಿಯ ಒತ್ತಡದಲ್ಲಿ ಆಡಿದವರು. ನಾನು ಇಬ್ಬರಿಗೂ ಸಮಾನ ಸ್ಥಾನವನ್ನು ನೀಡುವೆ' ಎಂದು ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹೇಳಿದ್ದಾರೆ.

`ಶತಕೋಟಿಗೂ ಅಧಿಕ ಜನರ ನಿರೀಕ್ಷೆಯ ಭಾರವನ್ನು ಹೊತ್ತುಕೊಂಡು ಸಚಿನ್ ಆಡಿದ್ದಾರೆ. ಲಾರಾ ಒಂದು ದುರ್ಬಲ ತಂಡದಲ್ಲಿದ್ದ ಅತ್ಯುತ್ತಮ ಆಟಗಾರ' ಎಂದು ವಾ ತಿಳಿಸಿದ್ದಾರೆ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ವಾ, `ಅವರು ತಪ್ಪು ಮಾಡುವುದೇ ಅಪರೂಪ. ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬ ಕಲೆ ಕರಗತಮಾಡಿಕೊಂಡಿದ್ದಾರೆ' ಎಂದಿದ್ದಾರೆ.

`ಭಾರತದಲ್ಲಿ ಅಭಿಮಾನಿಗಳು ಆಟಗಾರರಿಂದ ಪ್ರತಿಬಾರಿಯೂ ಉತ್ತಮ ಪ್ರದರ್ಶನ ನಿರೀಕ್ಷಿಸುವರು. ಆದ್ದರಿಂದ ಭಾರತ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲ' ಎಂದು ಹೇಳಿದ್ದಾರೆ.

ಆಸೀಸ್‌ಗೆ ಅವಕಾಶವಿದೆ: ಪ್ರಸಕ್ತ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ವಾ, `ಇಂಗ್ಲೆಂಡ್ ನೆಲದಲ್ಲಿ ಆಸೀಸ್ ತಂಡ ಪರದಾಟ ನಡೆಸುತ್ತಿರುವುದು ನಿಜ. ಆದರೆ ತಿರುಗೇಟು ನೀಡಬಲ್ಲಂತಹ ತಾಕತ್ತು ಮೈಕಲ್ ಕ್ಲಾರ್ಕ್ ಬಳಗಕ್ಕೆ ಇದೆ. ತಂಡದ ಆಟಗಾರರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುವುದು ಅಗತ್ಯ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.